ವರುಣಾರ್ಭಟದ ನಡುವೆ ದುಮ್ಮಿಕ್ಕಿ ಹರಿಯುತ್ತಿರುವ ಜಲಪಾತಗಳ ವೀಕ್ಷಣೆಗೆಂದು ತೆರಳುತ್ತಿರುವ ಪ್ರವಾಸಿಗರು ಅಪಾಯಕ್ಕೆ ಸಿಲುಕಿಕೊಂಡಿರುವ ಘಟನೆ ಗೋವಾದ ಪಾಲಿ ಜಲಪಾತದಲ್ಲಿ ನಡೆದಿದೆ.
ವೀಕೆಂಡ್ ಗಾಗಿ ಗೋವಾದ ಪಾಲಿ ಜಲಪಾತಕ್ಕೆ ಮೋಜು-ಮಸ್ತಿಗೆಂದು ತೆರಳಿದ್ದ ಪ್ರವಾಸಿಗರು ಪ್ರವಾಹದ ಹೊಡೆತಕ್ಕೆ ಸಿಲುಕಿ ರೆಸಾರ್ಟ್ ನಲ್ಲಿ ಜಲದಿಗ್ಬಂಧನಕ್ಕೀಡಾಗಿದ್ದಾರೆ.
ಮಳೆಯಿಂದಾಗಿ ಪಾಲಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಈ ಭಾಗಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ಏಕಾಏಕಿ ಸುರಿದ ಭಾರಿ ಮಳೆಯಿಂದಾಗಿ ಪಾಲಿ ಜಲಪಾತದ ಸುತ್ತಮುತ್ತ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಜಲಪಾತದ ವೀಕ್ಷಣೆಗೆ ಹೋದವರು ಅಪಾಯಕ್ಕೆ ಸಿಲುಕಿಕೊಂಡಿದ್ದಾರೆ. ಮೋಜು-ಮಸ್ತಿಗೆಂದು ಸಂಭ್ರಮಿಸಲು ಹೋದವರಿಗೆ ಸಾವಿನ ದರ್ಶನವಾದಂತ ಭೀತಿ ಶುರುವಾಗಿದೆ. ಕರ್ನಾಟಕದ 50 ಜನರು, ಗೋವಾ, ಮಹಾರಾಷ್ಟ್ರದ ಸುಮಾರು 100ಕ್ಕೂ ಹೆಚ್ಚು ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಾಜ್ಯದ 50 ಪ್ರವಾಸಿಗರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದೆ. ಇದೇ ವೇಳೆ ಮಹಾರಾಷ್ಟ್ರ, ಗೋವಾ ಪ್ರವಾಸಿಗರನ್ನು ಕೂಡ ರಕ್ಷಿಸಲಾಗಿದೆ