ಮಹಾತ್ಮ ಗಾಂಧಿ ಬಗ್ಗೆ ಹೇಳಿಕೆ; ಪ್ರಧಾನಿ ಮೋದಿ ವಿರುದ್ಧ ಪೊಲೀಸ್ ದೂರು ದಾಖಲು

ನವದೆಹಲಿ: ಮಹಾತ್ಮ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಲುಯಿತ್ ಕುಮಾರ್ ಬರ್ಮನ್ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಗುವಾಹಟಿಯ ಹತಿಗಾಂವ್ ಪೊಲೀಸ್ ಠಾಣೆಗೆ ಬುಧವಾರ ರಾತ್ರಿ ಸಲ್ಲಿಸಿದ ದೂರಿನಲ್ಲಿ ಮೋದಿ ರಾಷ್ಟ್ರಪಿತನ ಬಗ್ಗೆ ಅತ್ಯಂತ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬರ್ಮನ್ ಹೇಳಿದ್ದಾರೆ. ಪೊಲೀಸರ ಪ್ರಕಾರ, ಈ ಸಂಬಂಧ ಇನ್ನೂ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಮತ್ತು ಪ್ರಾಥಮಿಕ ತನಿಖೆ ನಡೆಯುತ್ತಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಧಾನಿ ಮೋದಿ, “ಮಹಾತ್ಮ ಗಾಂಧಿ ವಿಶ್ವದಾದ್ಯಂತ ಶ್ರೇಷ್ಠ ವ್ಯಕ್ತಿ. ಕಳೆದ 75 ವರ್ಷಗಳಲ್ಲಿ ಇಡೀ ಜಗತ್ತಿಗೆ ಮಹಾತ್ಮ ಗಾಂಧಿಯವರ ಬಗ್ಗೆ ತಿಳಿದಿದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಲ್ಲವೇ? ಅವರ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ಹೇಳಲು ನನಗೆ ವಿಷಾದವಿದೆ. ‘ಗಾಂಧಿ’ ಚಿತ್ರ ಮೊದಲು ಬಿಡುಗಡೆಯಾದಾಗ, ಈ ವ್ಯಕ್ತಿ ಯಾರು ಎಂಬ ಬಗ್ಗೆ ವ್ಯಾಪಕ ಆಸಕ್ತಿ ಇತ್ತು. ನಾವು ಇದನ್ನು ಮಾಡಿಲ್ಲ…”ಎಂದಿದ್ದರು.

ಇದು ಅತ್ಯಂತ ಅವಹೇಳನಕಾರಿ ಹೇಳಿಕೆಯಾಗಿದೆ ಮತ್ತು ಭಾರತದ ನಾಗರಿಕರು ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ” ಎಂದು ಬರ್ಮನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. “ನಾಗರಿಕರಾಗಿ ಮಹಾತ್ಮ ಗಾಂಧಿಗೆ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ. ಅವರನ್ನು ಜಗತ್ತಿಗೆ ಪರಿಚಯಿಸಲು ಯಾವುದೇ ಚಲನಚಿತ್ರದ ಅಗತ್ಯವಿಲ್ಲ” ಎಂದು ರಜತ್ ಕಮಲ್ ವಿಜೇತ ಅಸ್ಸಾಮಿ ಚಿತ್ರದ ನಿರ್ಮಾಪಕ ಬರ್ಮನ್ ಹೇಳಿದರು.

Latest Indian news

Popular Stories