ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗವಿಲ್ಲ ಕಾಯ್ದೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ, ಫೆಬ್ರವರಿ.29: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ರಾಜಸ್ಥಾನದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುವುದಿಲ್ಲ ಎಂಬ ರಾಜ್ಯದ ಈ 1989 ರ ಕಾನೂನಿಗೆ ಈಗ ಸುಪ್ರೀಂ ಕೋರ್ಟ್‌ನ ಅನುಮೋದನೆಯ ಮುದ್ರೆ ಸಿಕ್ಕಿದೆ.ರಾಜಸ್ಥಾನ ಸರ್ಕಾರದ ಈ ನಿಯಮವು ತಾರತಮ್ಯವಲ್ಲ ಮತ್ತು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ತೀರ್ಪು ನೀಡಿದೆ.

ಈ ನಿಯಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ತೀರ್ಪು ನೀಡಿದ್ದಾರೆ. ಇದು ನೀತಿಯ ವ್ಯಾಪ್ತಿಗೆ ಒಳಪಡುತ್ತದೆ ಮತ್ತು ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು ಆದೇಶದಲ್ಲಿ ತಿಳಿಸಿದೆ. 2022 ರ ಅಕ್ಟೋಬರ್ 12 ರ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಪೀಠವು ಎತ್ತಿಹಿಡಿದಿದೆ. ನಿಯಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಮಾಜಿ ಸೈನಿಕ ರಾಮಜಿ ಲಾಲ್ ಜಾಟ್ ಅವರ ಅರ್ಜಿಯನ್ನು ವಜಾಗೊಳಿಸಿತು.

2017 ರ ಜನವರಿಯಲ್ಲಿ ರಕ್ಷಣಾ ಸೇವೆಗಳಿಂದ ನಿವೃತ್ತರಾದ ನಂತರ, ರಾಮಜಿ ಲಾಲ್ ಜಾಟ್ ಮೇ 2018 ರಲ್ಲಿ ರಾಜಸ್ಥಾನ ಪೊಲೀಸ್‌ನಲ್ಲಿ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.ಆದರೆ, 1 ಜೂನ್ 2002 ರ ನಂತರ ಅವರು ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರಿಂದ ಅವರ ಅರ್ಜಿಯನ್ನು ರಾಜಸ್ಥಾನ ಪೊಲೀಸ್ ಅಧೀನ ಸೇವಾ ನಿಯಮಗಳು,1989 ರ ಅಡಿಯಲ್ಲಿ ತಿರಸ್ಕರಿಸಲಾಯಿತು. ರಾಜಸ್ಥಾನದ ವಿವಿಧ ಸೇವಾ (ತಿದ್ದುಪಡಿ) ನಿಯಮಗಳು- 2001 ರ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ.

ಎರಡಕ್ಕಿಂತ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ವರ್ಗೀಕರಣವು ತಾರತಮ್ಯವಲ್ಲ ಮತ್ತು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ.

ಕುಟುಂಬ ಯೋಜನೆಯನ್ನು ಉತ್ತೇಜಿಸುವುದು ಈ ನಿಬಂಧನೆಯ ಹಿಂದಿನ ಉದ್ದೇಶವಾಗಿತ್ತು” ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಹೇಳಿದೆ.1989 ರ ರಾಜಸ್ಥಾನ ಪೊಲೀಸ್ ಅಧೀನ ಸೇವಾ ನಿಯಮಗಳ ನಿಯಮ 24 (4) ರ ಅಡಿಯಲ್ಲಿ ಮಾಜಿ ಸೈನಿಕರ ಅರ್ಜಿಯನ್ನು ತಿರಸ್ಕರಿಸಲಾಯಿತು.

ಜೂನ್ 1, 2002 ರ ನಂತರ ಅವರು ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರಿಂದ, ಅವರು ರಾಜ್ಯದ ರಾಜಸ್ಥಾನದ ವಿವಿಧ ಸೇವಾ (ತಿದ್ದುಪಡಿ) ನಿಯಮಗಳು, 2001ರ ಅಡಿಯಲ್ಲಿ ಸಾರ್ವಜನಿಕ ಉದ್ಯೋಗಕ್ಕೆ ಅನರ್ಹರಾಗಿದ್ದಾರೆ ಎನ್ನಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ರಾಜಸ್ಥಾನ ಹೈಕೋರ್ಟ್‌ಗೆ ಮೊರೆ ಹೋದರು. ಅವರನ್ನು ಅನರ್ಹಗೊಳಿಸಿರುವ ನಿಯಮವು ನೀತಿಯ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ನ್ಯಾಯಾಲಯದ ಯಾವುದೇ ಹಸ್ತಕ್ಷೇಪವನ್ನು ಸಮರ್ಥಿಸುವುದಿಲ್ಲ ಎಂದು ತೀರ್ಪು ನೀಡಿತ್ತು

Latest Indian news

Popular Stories