ಚಿಂತಾಮಣಿ: ಅಂತರ್ಜಲ ವೃದ್ಧಿಗಾಗಿ ಎಚ್.ಎನ್. ವ್ಯಾಲಿ ಯೋಜನೆಯಡಿ ಚಿಂತಾಮಣಿ ತಾಲ್ಲೂಕಿನ 119 ಕೆರೆಗಳು ಮತ್ತು ಶಿಡ್ಲಘಟ್ಟ ತಾಲ್ಲೂಕಿನ 50 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ₹240 ಕೋಟಿ ವೆಚ್ಚದ ಅಂದಾಜುಪಟ್ಟಿ ತಯಾರಿಸಲಾಗಿದೆ. ಇದಕ್ಕೆ ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ತಾಲ್ಲೂಕಿನ ಕೋನಪ್ಪಲ್ಲಿ ಬಳಿ ನಿರ್ಮಾಣವಾಗಲಿರುವ ವಾಲ್ಮೀಕಿ ಭವನಕ್ಕೆ ₹4 ಕೋಟಿ ಹೆಚ್ಚುವರಿ ಅನುದಾನ ಮಂಜೂರಾದ ಹಿನ್ನೆಲೆಯಲ್ಲಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರ ಜೊತೆ ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂತರ್ಜಲ ಅಭಿವೃದ್ಧಿಪಡಿಸಲು ತಾಲ್ಲೂಕಿನಲ್ಲಿ ಹಲವಾರು ಚೆಕ್ ಡ್ಯಾಂಗಳನ್ನು ಮಂಜೂರು ಮಾಡಿಸಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕೆ.ಸಿ. ವ್ಯಾಲಿ ಯೋಜನೆಯಲ್ಲಿ ತಾಲ್ಲೂಕಿನ 55 ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಂಡರೆ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ರೈತರ ಬದುಕು ಹಸನಾಗುತ್ತದೆ’ ಎಂದು ಹೇಳಿದರು.
ಕೆ.ಸಿ ವ್ಯಾಲಿ ಮತ್ತು ಎಚ್.ಎನ್. ವ್ಯಾಲಿಯಿಂದ ಕೆರೆಗಳಿಗೆ ನೀರು ಹರಿಸಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ₹140 ಕೋಟಿ ಯೋಜನೆ ರೂಪಿಸಲಾಗಿದೆ. ಹಿಂದಿನ ಶಾಸಕರು ಭಕ್ತರಹಳ್ಳಿ-ಅರಸೀಕೆರೆ ಯೋಜನೆಗೆ ಅನುದಾನ ಮಂಜೂರು ಮಾಡಿಸಿಲ್ಲ. ನಗರಸಭೆ ನಗರೋತ್ಥಾನ ಯೋಜನೆಯ ₹25 ಕೋಟಿ ಅನುದಾನದಲ್ಲಿ ₹12 ಕೋಟಿ ಬಳಕೆ ಮಾಡಿದ್ದಾರೆ. ನಾನು ನಗರಸಭೆಗೆ ಮಂಜೂರಾದ ಅನುದಾನವನ್ನು ಇತರೆ ಕಾಮಗಾರಿಗಳಿಗೆ ಬಳಸುವುದಿಲ್ಲ ಎಂದರು.
ಸಣ್ಣ ನೀರಾವರಿ ಇಲಾಖೆಯಿಂದ ₹35 ಕೋಟಿ, ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನಹೊಳೆ ಯೋಜನೆಯಲ್ಲಿ ₹41 ಕೋಟಿ ತರಲು ಪ್ರಯತ್ನಿಸಲಾಗುತ್ತಿದೆ. ಯಶವಂತಪುರ ಗ್ರಾಮದಲ್ಲಿ ₹5 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ. ಭಕ್ತರಹಳ್ಳಿ-ಅರಸೀಕೆರೆ ವಿಸ್ತರಣೆಗೆ ₹40 ಕೋಟಿ, ಕನಂಪಲ್ಲಿ ಕೆರೆಗೆ ₹40 ಕೋಟಿ ಮಂಜೂರು ಮಾಡಿಸಲಾಗಿದ್ದು, ₹40 ಕೋಟಿ ಬೇಡಿಕೆ ಇದೆ ಎಂದು ತಿಳಿಸಿದರು.
ರೈತರ ಜಮೀನಿಗೆ ಉತ್ತಮ ಬೆಲೆ ಕೊಡಿಸಲು ಯತ್ನ: ಚೇಳೂರು ಮತ್ತು ಮುರುಗಮಲ್ಲ ರಸ್ತೆಯಲ್ಲಿ ಒಂದು ಸಾವಿರ ಎಕರೆ ಜಮೀನು ಕೈಗಾರಿಕಾ ವಲಯಕ್ಕೆ ಪಡೆದುಕೊಳ್ಳುವುದು ಅಂತಿಮ ಹಂತಕ್ಕೆ ಬಂದಿದೆ. ರೈತರ ಜಮೀನುಗಳಿಗೆ ಒಳ್ಳೆಯ ಬೆಲೆ ಕೊಡಿಸಲು ಪ್ರಯತ್ನಿಸುತ್ತಿದ್ದೇನೆ. ಈಗಾಗಲೇ ಅಧಿಕಾರಿಗಳು ಬೆಲೆಯನ್ನು ನಿಗದಿ ಮಾಡಿದ್ದಾರೆ. ಅಂತಿಮವಾಗಿ ಇನ್ನೂ ಹೆಚ್ಚಿನ ಬೆಲೆ ನಿಗದಿಪಡಿಸಲು ಸಾಧ್ಯವಾಗುವ ಎಲ್ಲ ಪ್ರಯತ್ನ ನಡೆಯುತ್ತಿದೆ ಎಂದರು.
ಮುರುಗಮಲ್ಲ ಹೋಬಳಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸಚಿವ ಡಾ.ಎಂ.ಸಿ. ಸುಧಾಕರ್ ಚಾಲನೆ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೊರತುಪಡಿಸಿ ಕಂದಾಯ ಶಿಕ್ಷಣ ನೀರಾವರಿ ಸಮಾಜ ಕಲ್ಯಾಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯಾವ ಅಧಿಕಾರಿಗಳು ಇರಲಿಲ್ಲ.
ಇದರಿಂದ ಅಸಮಾಧಾನಗೊಂಡ ಅವರು ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಿ ಸ್ಥಳದಲ್ಲಿರುವಂತೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದರು. ‘ನಾನು ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ವಿವಿಧ ಸಮಸ್ಯೆ ದೂರು ದುಮ್ಮಾನಗಳನ್ನು ಹೇಳಿಕೊಳ್ಳಲು ಬರುತ್ತಾರೆ. ಅವರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಇಲ್ಲದಿದ್ದರೆ ಹೇಗೆ? ಅವರ ಸಮಸ್ಯೆಗಳಿಗೆ ಯಾರು ಉತ್ತರ ನೀಡುವುದು. ಇದು ಅಶಿಸ್ತಿನ ವರ್ತನೆ ಮುಂದೆ ಪುನರಾವರ್ತನೆ ಆಗದಂತೆ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.