ಕುಂದಾಪುರ: ಸಮುದ್ರದಲ್ಲಿ ಬಿಟ್ಟಿದ್ದ ಮಾರಣಬಲೆ ತರಲು ಹೋದ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೋಟ ಸಮೀಪದ ಪಾರಂಪಳ್ಳಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಪಾರಂಪಳ್ಳಿ ನಿವಾಸಿ ಭಾಸ್ಕರ ಪೂಜಾರಿ(55) ಎಂದು ಗುರುತಿಸಲಾಗಿದೆ. ಇವರು ಪಾರಂಪಳ್ಳಿಯ ಬಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಲುವಾಗಿ ಮಾರಣಬಲೆಯನ್ನು ಬಿಟ್ಟಿದ್ದು, ಅದನ್ನು ತರಲು ಹೋದ ಭಾಸ್ಕರ ಪೂಜಾರಿ, ಬಹೃತ್ ಅಲೆಗಳಲ್ಲಿ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋದರು.
ತಕ್ಷಣ ಮಲ್ಪೆಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯ ಕೆ.ಎನ್.ಡಿ. (ಕರಾವಳಿ ನಿಯಂತ್ರಣ ದಳ) ಸಿಬ್ಬಂದಿ ಸತೀಶ್ ಮತ್ತು ಸುದರ್ಶನ್ ಎಸ್. ಕುಂದರ್ ಸಮುದ್ರಕ್ಕೆ ಹಾರಿ, ಭಾಸ್ಕರ ಪೂಜಾರಿಯನ್ನು ತೀರಕ್ಕೆ ಕರೆತಂದರು. ತೀವ್ರವಾಗಿ ಅಸ್ವಸ್ಥಗೊಂಡ ಭಾಸ್ಕರ ಪೂಜಾರಿಯನ್ನು ಕೂಡಲೇ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಭಾಸ್ಕರ್ ಪೂಜಾರಿ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ