ಮಂಗಳೂರು: ವಿಧಾನಸಭೆಯ ಅಧಿವೇಶನದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಹೇಳಿರುವ ಆರ್. ಅಶೋಕ್ ರನ್ನು ವಿಪಕ್ಷ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ವಿಜಯೇಂದ್ರ ಅವರನ್ನು ಭೇಟಿಯಾದ ಮುಖಂಡರು, ಈ ಹೇಳಿಕೆಗೆ ಆರ್. ಅಶೋಕ್ ಹಿಂದೂ ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ
ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್
ಪಂಪ್ ವೆಲ್, ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಮುಖಂಡರು ವಿಜಯೇಂದ್ರ ಅವರನ್ನು ಭೇಟಿಯಾಗಿ ಆರ್.ಅಶೋಕ್ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ್ದಾರೆ.
ಮಂಗಳೂರಿನಲ್ಲಿ ಪಬ್ ದಾಳಿ ಮಾಡಿರುವ ಬಜರಂಗದಳ ಕಾರ್ಯಕರ್ತರ ಮೇಲೆ ಮುಲಾಜಿಲ್ಲದೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಆರ್ ಅಶೋಕ್ ಅವರು ಅಧಿವೇಶನದಲ್ಲಿ ಹೇಳಿದ್ದರು. ಇದು ಹಿಂದೂ ಕಾರ್ಯಕರ್ತರ ಮನಸ್ಸಿಗೆ ನೋವು ಉಂಟು ಮಾಡಿದೆ. ಹಿಂದುತ್ವದ ಪರವಾಗಿ ಮಾತನಾಡಬೇಕಾದವರೇ, ಹಿಂದುತ್ವ, ಸಿದ್ಧಾಂತ ಎಂದು ಹೋರಾಡಿಕೊಂಡು ಬಂದವರ ಮೇಲೆ ವಿರುದ್ಧ ಮಾತನಾಡಿರುವುದು ಬಹಳ ನೋವಾಗಿದೆ. ಇಂತಹ ವ್ಯಕ್ತಿ ವಿಪಕ್ಷ ನಾಯಕನಾಗಿ ಮುಂದುವರಿಯಬಾರದು. ಇದನ್ನು ಪಕ್ಷದ ಹಿರಿಯರ ಗಮನಕ್ಕೆ ತಂದು ಅಶೋಕ್ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಬೇಕು. ಅಲ್ಲದೆ, ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಹಿಂದೂ ಮುಖಂಡರು ವಿಜಯೇಂದ್ರರನ್ನು ಒತ್ತಾಯಿಸಿದ್ದಾರೆ.