ಕಾರವಾರದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ – ವಸ್ತುಗಳನ್ನು ಖರೀದಿಗೂ ಮುನ್ನ ಪರಿಶೀಲಿಸಿ ; ನ್ಯಾ.ಮಾಯಣ್ಣ . ಬಿ .ಎಲ್

ಕಾರವಾರ : ಗ್ರಾಹಕರು ವಸ್ತುವಿನ ಗುಣಮಟ್ಟ, ಅವಧಿ, ಉತ್ಪನ್ನದ ವಿವರಗಳನ್ನು ಜವಾಬ್ದಾರಿ ನಾಗರೀಕನಾಗಿ ಪರಿಶೀಲಿಸಿ ಖರೀದಿಸಿದಾಗ ಮೋಸ ಹೋಗುವುದನ್ನು ತಡೆಗಟ್ಟಬಹುದು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ ಎಲ್ ಅವರು ಹೇಳಿದರು.

ಅವರು ಜಿಲ್ಲಾಡಳಿತ,ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಇಲಾಖೆ ಹಾಗೂ ಪ್ರೀಮಿಯರ್ ಕಾಲೇಜು ನಂದನಗದ್ದಾ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ ‘ಗ್ರಾಹಕರಿಗೊಸ್ಕರ ಗುಣಮಟ್ಟದ ಹಾಗೂ ಜವಾಬ್ದಾರಿಯುತ ಕೃತಕ ಬುದ್ದಿಮತ್ತೆ’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಗ್ರಾಹಕರ ದಿನಾಚರಣೆ ಹಾಗೂ ಗ್ರಾಹಕರ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ಪಾದಕರು ಮತ್ತು ವ್ಯಾಪಾರಿಗಳು ಗ್ರಾಹಕರಿಗೆ ತಮ್ಮ ವಸ್ತುಗಳನ್ನು ಶಿರ್ಘವಾಗಿ ತಲುಪಿಸುವ ಅವಸರದಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿ ಆಕರ್ಷಕ ಜಾಹೀರಾತುಗಳನ್ನು ನೀಡುವ ಮೂಲಕ ಕಡಿಮೆ ಗುಣಮಟ್ಟದ ವಸ್ತುಗಳನ್ನು ಮಾರಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಗ್ರಾಹಕರು ಈ ಜಾಹೀರಾತುಗಳಿಗೆ ಮಾರುಹೋಗದೆ ಎಚ್ಚರದಿಂದ ಇರಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಹೆಚ್ಚಾಗಿ ಇ-ಕಾಮರ್ಸ ಮತ್ತು ಆನ್‌ಲೈನ್ ಮೂಲಕ ವಸ್ತುಗಳ ಖರೀದಿ ಹಾಗೂ ಸೇವೆ ಪಡೆಯುತ್ತಿದ್ದಾರೆ.

ಗ್ರಾಹಕರಿಗೆ ತಾವು ಕೊಂಡುಕೊಳ್ಳುವ ವಸ್ತುವಿನ ಗುಣಮಟ್ಟ, ತೂಕ ಪರಿಶೀಲನೆ ಮಾಡಿ ಆಯ್ಕೆ ಮಾಡಿಕೊಳ್ಳುವ ಹಕ್ಕು ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಮುಂಜಾಗ್ರತೆವಹಿಸುವುದು ಮುಖ್ಯವಾಗಿದೆ. ತಾವು ಖರೀದಿಸಿದ ವಸ್ತುವಿನ ಗುಣಮಟ್ಟದಲ್ಲಿ ದೋಷ ಕಂಡುಬಂದರೆ ಅಥವಾ ಸೇವೆಯಲ್ಲಿ ನ್ಯೂನತೆ ಕಂಡು ಬಂದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿರುತ್ತಾರೆ. ಗ್ರಾಹಕರು ತಮ್ಮ ಖರೀದಿಗೂ ಮುನ್ನ ಎಚ್ಚರವಹಿಸುವುದು ಅವಶ್ಯ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗುತ್ತಾರೆ. ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹಾಗಾಗಿ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಕಡ್ಡಾಯವಾಗಿ ರಶೀದಿಯನ್ನು ಪಡೆಯಬೇಕು ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಎಮ್ ಬಮ್ಮನಕಟ್ಟಿ ಮಾತನಾಡಿ, ಆನ್‌ಲೈನ್‌ನಲ್ಲಿ ಆಕರ್ಷಕ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ ಎಂದು ಖರೀದಿ ಮಾಡುವ ಮುಂಚೆ ಅವರು ಅಲ್ಲಿ ನೀಡಿರುವ ನಿಬಂಧನೆಗಳನ್ನು ಪೂರ್ತಿಯಾಗಿ ತಿಳಿದುಕೊಳ್ಳದೇ, ಖರೀದಿಸಿದಾಗ ಮೋಸ ಹೋಗುವುದು ಹೆಚ್ಚು ಹೀಗಾಗಿ ಯಾರೇ ಆದರು ವಸ್ತುಗಳನ್ನು ಖರೀದಿಸುವಾಗ ಎಲ್ಲವನ್ನು ಪರಿಶೀಲಿಸುವ ಜಾಗೃತ ನಾಗರೀಕರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ನೈನಾ ಅಶೋಕ ಕಾಮಟೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ಡಿ ರೇವಣಕರ, ಜಿಲ್ಲಾ ಅಂಕಿತ ಅಧಿಕಾರಿ ಡಾ. ರಾಜಶೇಖರ ಪಾಳೆದವರ, ತೂಕ ಮತ್ತು ಅಳತೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ದೇವರಾಜ ಡಿ.ಎನ್, ಪ್ರೀಮಿಯರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋವಿಂದಪ್ಪ ಆರ್, ಮತ್ತಿತರರು ಇದ್ದರು.
………

Latest Indian news

Popular Stories