ಪ್ರಜಾಪ್ರಭುತ್ವ ಕಲ್ಪನೆ ಬುದ್ಧನ ವಿಚಾರದ ಪ್ರಭಾವ : ಸಾಹಿತಿ ವೀರ ಹನುಮಾನ

ರಾಯಚೂರು: ಬುದ್ಧನ ವಿಚಾರಗಳು ಸರ್ವಕಾಲಿಕ ಸತ್ಯವೆಂದು ಅರಿತು ಇದಕ್ಕೆ ಪ್ರಭಾವಿತರಾಗಿ ಡಾ.ಬಿ. ಆರ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದಿದ್ದಾರೆ ಎಂದು ಸಾಹಿತಿ ವೀರಹನುಮಾನ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಗುರುವಾರ ನವಯಾನ ಬೌದ್ಧ ಧಮ್ಮ ಸಂಘ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಬುದ್ಧ ಪೂರ್ಣಿಮಾ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ತಿಳಿಸುವ ಪ್ರಜಾಪ್ರಭುತ್ವದ ಕಲ್ಪನೆ ಬುದ್ಧನ ವಿಚಾರಗಳಿಂದ ಪ್ರಭಾವಿತವಾಗಿದೆ. ಸಾರ್ವಜನಿಕರಿಗೆ ಮೌಢ್ಯದಿಂದ ಹೊರ ಬಂದು ವೈಚಾರಿಕತೆ ಮೂಡಿಸಬೇಕಿದೆ. ಅಶೋಕ ಸಾಮ್ರಾಟ ಯುದ್ಧದಿಂದ ಸಾವಿರಾರು ಸೈನಿಕರ ಸಾವಿನಿಂದ ಜಿಗುಪ್ಸೆಯಾಗಿ ಬೌದ್ಧ ಧರ್ಮ ಸ್ವೀಕರಿಸಿ ಮಹಾನ್ ಮಾನವತಾವಾದಿಯಾದ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸನಾತನ ಹಿಂದು ಧರ್ಮದಿಂದ ಹೊರಬಂದು ಬೌದ್ಧ ಧರ್ಮ ಸ್ವೀಕರಿಸಿದ್ದರು ಎಂದು ಹೇಳಿದರು.

ಹೋರಾಟಗಾರ ಶ್ರೀನಿವಾಸ ಕಲವಲದೊಡ್ಡಿ ಮಾತನಾಡಿ, ಬಿಜೆಪಿ ಸನಾತನವಾದಿಗಳ ಗೊಂಬೆಯಾಗಿದೆ. ಆರ್ ಎಸ್ಎಸ್, ವಿಶ್ವ ಹಿಂದು ಪರಿಷತ್ ನಾಯಕರು ತಾವು ಹಿಂದುಗಳು ಎಂದು ಹಿಂದುಗಳಿಗೆ ವಂಚನೆ ಮಾಡುತ್ತಿದ್ದಾರೆ. ಗುಡಿ, ಗುಂಡಾರ ಕಟ್ಟಿ ಪೂಜೆ ಮಾಡುವುದು ಸನಾತನ ವಿಚಾರ. ಬುದ್ಧ, ಬಸವ, ಡಾ.ಬಿ.ಆರ್ ಅಂಬೇಡ್ಕರ್ ಅವರು ಇದನ್ನು ವಿರೋಧಿಸಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದರು. ಆದರೆ ವಿಜ್ಞಾನ–ತಂತ್ರಜ್ಞಾನ ಅಭಿವೃಧ್ಧಿಯಾದರೂ ಅನೇಕರು ಮೌಢ್ಯಾಚರಣೆ ಮಾಡುತ್ತಿದ್ದಾರೆ. ಸಾಹಿತಿಗಳು, ವಿಚಾರವಾದಿಗಳು, ಬರಹಗಾರರು ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲ, ಹೋರಾಟಗಾರ ಎಸ್.ಮಾರೆಪ್ಪ, ಆಂಜನೇಯ ಕುರುಬದೊಡ್ಡಿ, ಹೋರಾಟಗಾರ ಜೆ.ಬಿ ರಾಜು , ಹೇಮರಾಜ ಅಸ್ಕಿಹಾಳ, ಲಕ್ಷ್ಮೀರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಮಾರೆಪ್ಪ ಹರವಿ, ಈರಣ್ಣ ಬೆಂಗಾಲಿ, ಖಾಜಾ ಅಸ್ಲಂ ಅಹ್ಮದ್ ಮತ್ತಿತರರು ಇದ್ದರು.

Latest Indian news

Popular Stories