ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಪಲಕನಮರಡಿ ಗ್ರಾಮ ಪಂಚಾಯಿತಿಯ ವಂದಲಿ ಗ್ರಾಮದ ರೈತರಿಗೆ ಫಸಲ್ ಭೀಮಾ ಯೋಜನೆಯಡಿ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ರೈತರು ನಗರದ ಜಿಲ್ಲಾಡಳಿತ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಈಗಾಗಲೇ ದೇವದುರ್ಗ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ವಂದಲಿ ಗ್ರಾಮ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುವುದಿಲ್ಲ. ಮಳೆ ಆಧಾರಿತ ಕೃಷಿ ಜಮೀನುಗಳಿದ್ದು ರೈತರು ಮಳೆ ಬಾರದ ಕಾರಣ ಬೆಳೆ ನಷ್ಟದಿಂದ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ದೂರಿದರು.
ಕೃಷಿ ಇಲಾಖೆಯ ಅಧಿಕಾರಗಳು ಕೂಡಲೇ ಸಮಸ್ಯೆಯನ್ನು ಅರಿತು ಫಸಲ್ ಭೀಮಾ ಯೋಜನೆಯಡಿ ವಿಮೆ ಹಣ ಪಾವತಿಸಿದ ರೈತರ ಖಾತೆಗೆ ನಷ್ಟ ಪರಿಹಾರ ಜಮಾ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ರೈತರು ಒತ್ತಾಯಿಸಿದ್ದಾರೆ.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ವೀರೇಶ ಗೌಡ, ಭೀಮನಗೌಡ, ರೈತರಾದ ನಾಗರಾಜ ತೋಟದ, ಶಿವಪ್ಪ ತಳವಾರ, ಅಮರೇಶ ಬೋರೆಡ್ಡಿ, ರಂಗಣ್ಣ ಮಡಿವಾಳ, ರುದ್ರಪ್ಪ ಬೋಂಬಾಯಿ ಇದ‌್ದರು.