ಎಲೆಕ್ಟ್ರಿಕಲ್ ಬೈಕ್ ಅಂಗಡಿಗೆ ಬೆಂಕಿ; ಓರ್ವನಿಗೆ ಗಾಯ

ರಾಯಚೂರು: ರಾಯಚೂರು ನಗರದ ಮಹಾವೀರ ವೃತ್ತದ ಗಿಗಾ ಫೈಬರ್‌ ಅಂಗಡಿಗೆ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಇಂದು ನಡೆದಿದೆ.

ಎಲೆಕ್ಟ್ರಿಕ್‌ ಬೈಕ್‌ ಬ್ಯಾಟರಿ ಚಾ‌ರ್ಜಿಂಗ್‌ ಮಾಡಲು ನಿಲ್ಲಿಸಿದ್ದಾಗ ಬ್ಯಾಟರಿ ಸ್ಪೋಟಿಸಿ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ರಸ್ತೆ ಬದಿಗೆ ನಿಲ್ಲಿಸಿದ್ದ ನಾಲ್ಕು ವಾಹನಗಳು ಜಖಂಗೊಂಡಿವೆ.

ಆರ್‌.ಕೆ.ಭಂಡಾರಿ ಮಾಲೀಕತ್ವದ ಅಂಗಡಿಯಲ್ಲಿ ಅನೇಕ ಎಲೆಕ್ಟ್ರ್ರಿಕ್‌ ಬ್ಯಾಟರಿಗಳು ಇದ್ದವು. ಬೈಕ್‌ನ ಬ್ಯಾಟರಿ ಸ್ಪೋಟಗೊಂಡು ಬೆಂಕಿ ಎರಡನೇ ಅಂತಸ್ತಿಗೆ ಆವರಿಸಿಕೊಂಡು ಎಲೆಕ್ಟ್ರಿಕ್‌ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಬೆಂಕಿಕಾಣಿಸಿಕೊಂಡಾಗ ಕಟ್ಟಡದಲ್ಲಿದ್ದ ಒಬ್ಬ ಯುವಕ ಕಟ್ಟಡದಿಂದ ಮೇಲಿಂದ ಹಾರಿದ್ದರಿಂದ ಗಾಯಗೊಂಡು ರಿಮ್ಸ್‌ಗೆ ದಾಖಲಿಸಲಾಗಿದೆ. ಕಚೇರಿಯಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾರುಕಟ್ಟೆ ಪ್ರದೇಶದಲ್ಲೇ ಈ ಅಂಗಡಿ ಇದೆ. ಪಕ್ಕದಲ್ಲಿ ಅನೇಕ ಬಟ್ಟೆ ಅಂಗಡಿಗಳೂ ಇವೆ. ಅದೃಷ್ಟವಾಶತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು, ಸದರ್‌ ಬಜಾರ್ ‍ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest Indian news

Popular Stories