ಅಧಿಕಾರಿಗಳ ವರ್ಗಾವಣೆ ದಂಧೆ ತಡೆಯಲು ಒತ್ತಾಯಿಸಿ ಗ್ರಾಕೂಸ್ ಪ್ರತಿಭಟನೆ

ರಾಯಚೂರು: ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಸರ್ಕಾರ ಮನಬಂದಂತೆ ವರ್ಣೆ ಮಾಡುವ ದಂಧೆಗೆ ಕಡಿವಾಣ ಹಾಕುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ(ಗ್ರಾಕೂಸ್)ಯಿಂದ ಬುಧವಾರ ಪ್ರತಿಭಟನೆ ನಡೆಯಿತು.

ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಯಾವುದೇ ಅಧಿಕಾರಿಗಳು ಒಂದು ಜಿಲ್ಲೆಗೆ ನೇಮಕವಾದಾಗ ಅಲ್ಲಿನ ಪರಿಸ್ಥಿತಿ, ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲು ಕನಿಷ್ಠ ಕಾಲಾವಕಾಶ ಬೇಕು. ಆದರೆ, ಜನಪ್ರತಿನಿಧಿಗಳು ತಮ್ಮ ನೇರಕ್ಕೆ ಕೆಲಸ ಮಾಡುವುದಿಲ್ಲ ಎಂಬ ಕಾರಣಕ್ಕೆ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಪದೇಪದೆ ವರ್ಗಾವಣೆ ಮಾಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ದೂರಿದರು.

ರಾಜ್ಯ ಸರ್ಕಾರದ ಈ ವರ್ಗಾವಣೆ ದಂಧೆ ಖಂಡನೀಯ. ಜಿಲ್ಲೆಯಲ್ಲಿ ನಿಯೋಜನೆಗೊಳ್ಳುವ ಯಾವುದೇ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ಕನಿಷ್ಠ ಮೂರು ವರ್ಷವಾದರೂ ಇಲ್ಲಿ ಕೆಲಸ ಮಾಡಬೇಕು. ಸರ್ಕಾರಿ ಶಾಲೆ ಶಿಕ್ಷಕರನ್ನು ಜಿಲ್ಲೆಯಿಂದ ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಿರುವ ಕಾರಣಕ್ಕೆ ಇಂದು ಶಿಕ್ಷಕರ ಕೊರತೆ ಕಂಡು ಬರುತ್ತಿದೆ. ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹಿನ್ನಡೆಯಾಗುತ್ತಿದೆ. ಮುಖ್ಯವಾಗಿ ಬಡ, ಮಧ್ಯಮ ವರ್ಗದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಇದು ಕೇವಲ ಒಂದು ಇಲಾಖೆಗೆ ಸೀಮಿತವಾದ ಸಮಸ್ಯೆಯಲ್ಲ. ಎಲ್ಲ ಇಲಾಖೆಗಳಲ್ಲೂ ಪದೇಪದೆ ಅಧಿಕಾರಿಗಳು ವರ್ಗಾವಣೆಯಾಗುತ್ತಿದ್ದು, ಕೆಲಸ ಕಾರ್ಯಗಳು ನಿಲ್ಲುವಂತಾಗಿದೆ. ಇನ್ನಾದರೂ ಅಧಿಕಾರಿಗಳನ್ನು ಅನಗತ್ಯವಾಗಿ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ನಿಲ್ಲಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಇಚ್ಛಾಶಕ್ತಿ ತೋರಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಗುರುರಾಜ, ಬಸವರಾಜ, ಶಾಂಭವಿ, ಈರಮ್ಮ, ಆಂಜನೇಯ, ರಾಘವೇಂದ್ರ, ಮಾರೆಪ್ಪ, ವಿದ್ಯಾಪಾಟೀಲ ಸೇರಿದಂತೆ ಅನೇಕ ಕಾರ್ಮಿಕರು ಪಾಲ್ಗೊಂಡಿದ್ದರು.

Latest Indian news

Popular Stories