ಶಿಕ್ಷಕರ ಹುದ್ದೆ ಭರ್ತಿಗೆ ಒತ್ತಾಯಿಸಿ ಶಾಸಕರ ಮನೆ ಮುಂದೆ ಪ್ರತಿಭಟನೆಗೆ ನಿರ್ಧಾರ: ಮೋಕ್ಷಮ್ಮ’

ರಾಯಚೂರು:ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿ ಶೀಘ್ರವೇ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲಾ ಅಭಿವೃದ್ಧಿ ವೇದಿಕೆಯ ಸದಸ್ಯೆ ಮೋಕ್ಷಮ್ಮ ತಿಳಿಸಿದರು.

ಅವರಿಂದು ನಗರದ ಪತ್ರಿಕಾಭವನದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 3495 ಪ್ರೌಢಶಾಲೆ, 11666 ಪ್ರಾಥಮಿಕ ಹಾಗೂ 2645 ದೈಹಿಕ ಶಿಕ್ಷಣಹಾಗೂ 398 ವಿಶೇಷ ಶಿಕ್ಷಕರು ಸೇರಿ ಒಟ್ಟು 17 443 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರತಿ ವರ್ಷ ಶಾಲೆಗಳು ಆರಂಭವಾಗುವ ವೇಳೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೇ ವಿಳಂಬ ಮಾಡುವುದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.

ಕಳೆದ ಜನವರಿ 25ರಂದು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದಾಗ ಶಿಕ್ಷಣ ಸಚಿವರು ಖಾಲಿ ಹುದ್ದೆ ಭರ್ತಿಗೆ ಭರವಸೆ ನೀಡಿದ್ದರು. ಆದರೆ ಇದುವರೆಗೆ ಶಿಕ್ಷಕರನ್ನು ಕಾಯಂಗೊಳಿಸಿಲ್ಲ ಹಾಗೂ ಅತಿಥಿ ಶಿಕ್ಷಕರಿಗೂ ಅವಕಾಶ ನೀಡಿಲ್ಲ. ಶಿಕ್ಷಕರ ಕೊರತೆಯಿಂದ ಸುಮಾರು 200 ಶಾಲೆಗಳು ಎಸ್ಎಸ್ಎಲ್ ಸಿಯಲ್ಲಿ ಶೂನ್ಯ ಫಲಿತಾಂಶ ಪಡೆದಿದೆ. ಶಿಕ್ಷಕರ ಖಾಲಿ ಹುದ್ದೆ ಭರ್ತಿಗೆ ಆಯಾ ಸ್ಥಳೀಯ ಶಾಸಕರು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.ಈ ಪತ್ರಿಕಾಗೋಷ್ಠಿಯಲ್ಲಿ ಹೋರಾಟಗಾರ್ತಿ ವಿದ್ಯಾ ಪಾಟೀಲ, ಮುಖಂಡರಾದ ಮಾರೆಪ್ಪ, ಶಿವರಾಮರೆಡ್ಡಿ ಇದ್ದರು.

Latest Indian news

Popular Stories