ಮಹಿಳಾ ಶೌಚಾಲಯ ಜಾಗ ಕಬಳಿಕೆ; ಡಿಸಿಗೆ ಮನವಿ


ರಾಯಚೂರು: ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಲದಕಲ್ ಗ್ರಾಮದಲ್ಲಿ ಮಹಿಳಾ ಶೌಚಾಲಯದ ನಿವೇಶನ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಹಾಗೂ ಕೆಆರ್‌ಎಸ್‌ ಸಂಘಟನೆಯ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಆನಂತರ ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಲದಕಲ್ ಗ್ರಾಮದ ಗೌಂಠಾನ ಜಾಗದಲ್ಲಿ ಈ ಹಿಂದೆ ಮಂಡಲ ಪಂಚಾಯಿತಿ ಅಸ್ತಿತ್ವದಲ್ಲಿದ್ದಾಗ ಮಹಿಳೆಯರಿಗಾಗಿ ಶೌಚಾಲಯ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಹಳೆಯ ಕಟ್ಟಡ ನೆಲಸಮಗೊಂಡಿತ್ತು. ಇದನ್ನು ಗ್ರಾಮದ ಲಕ್ಷ್ಮಣ ಭೋವಿ ಎಂಬುವರು ನಿವೇಶನ ಸ್ವಚ್ಛಗೊಳಿಸಿ ಮರಂ ಹಾಕಿ ಸ್ವಂತಕ್ಕೆ ಬಳಸಿಕೊಳಳಲು ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು

ಕೂಡಲೇ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರಿಶೀಲನೆ ಮಾಡಿ ಇದೇ ಸ್ಥಳದಲ್ಲಿ ಮಹಿಳೆಯರಿಗೆ ಹೈಟೆಕ್‌ ಶೌಚಾಲಯ ನಿರ್ಮಿಸಬೇಕು. ಸರ್ಕಾರಿ ಜಾಗ ಕಬಳಿಕೆ ಮಾಡಿದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎರಡು ಸಂಘಟನೆಯ ಮುಖಂಡರಾದ ಬೂದೆಯ್ಯ ಸ್ವಾಮಿ ಗಬ್ಬೂರು, ಬ್ರಹ್ಮಯ್ಯ ಆಚಾರಿ, ಶರಣಗೌಡ ಮಲದಕಲ್‌, ರೈತ ಮುಖಂಡರಾದ ಗನಿಸಾಬ್‌, ಮಲ್ಲಯ್ಯ ಕಟ್ಟಿಮನಿ, ಸೈಯದ ಅಬ್ಬಾಸಲಿ, ಸಂತೋಷ ಹಿರೇದಿನ್ನಿ, ಸದಸ್ಯ ಕೆ.ಗಿರಿಲಿಂಗಸ್ವಾಮಿ ಪಾಲ್ಗೊಂಡಿದ್ದರು.

Latest Indian news

Popular Stories