ಮಾವಿನಕೆರೆ ಒತ್ತುವರಿ ಮಾಡಿ ಮಳಿಗೆಗಳನ್ನು ನಿರ್ಮಿಸಿದ್ದನ್ನು ಖಂಡಿಸಿ ಪ್ರತಿಭಟನೆ

ರಾಯಚೂರು: ಐತಿಹಾಸಿಕ ಮಾವಿನಕೆರೆಯ ಜಾಗದಲ್ಲಿ ರಾತ್ರೋ ರಾತ್ರಿ 10ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳ ನಿರ್ಮಾಣ ನಿರ್ಮಾಣಕ್ಕೆ ಪರೋಕ್ಷವಾಗಿ ಸಹಕರಿಸಿದ ನಗರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಜಯ ಕರ್ನಾಟಕ ಒತ್ತಾಯಿಸಿದೆ.

ಈ ಕುರಿತು ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಮಾವಿನಕೆರೆಯ ಜಾಗದಲ್ಲಿ ರಾತ್ರೋರಾತ್ರಿ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಖಾಸಗಿ ಒತ್ತುವರಿದಾರರ ಹಿಂದೆ ನಗರಸಭೆಯ ಅಧಿಕಾರಿಗಳ ಬೆಂಬಲವಿದ್ದು ಕೆರೆಯ ಒತ್ತುವರಿ ತಡೆಯುತ್ತಿಲ್ಲ ಎಂದು ದೂರಿದರು.

ಈ ಹಿಂದೆ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾವಿನಕೆರೆಯ ಅಭಿವೃದ್ಧಿಗೆ ಸ್ಥಳ ಪರಿಶೀಲನೆ ಮಾಡಿ ಕೆರೆಯ ಒತ್ತುವರಿಯಾಗದಂತೆ ಹದ್ದುಬಸ್ತು ಮಾಡಬೇಕು ಎಂದು ನ್ಯಾಯಾಧೀಶರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕೆರೆಯ ಅಭಿವೃದ್ಧಿಗೆ ಸಚಿವ ಎನ್ ಎಸ್ ಬೊಸರಾಜು ಸಣ್ಣ ನೀರಾವರಿ ಇಲಾಖೆಯಿಂದ ₹5 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇಷ್ಟೆಲ್ಲ ವಿಷಯಗಳಿದ್ದರೂ ಜಿಲ್ಲಾಡಳಿತ ಹಾಗೂ ನಗರಸಭೆ ಕೆರೆ ಒತ್ತುವರಿ ಮಾಡಿ ಮಳಿಗೆಗಳ ನಿರ್ಮಾಣಕ್ಕೆ ಯಾಕೆ ತಡೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮಾವಿನಕೆರೆ 14 ಎಕರೆ ಈಗಾಗಲೇ ಅತಿಕ್ರಮಣವಾಗಿದೆ ಎಂದು ಕಂದಾಯ ಇಲಾಖೆಯ ಭೂಮಾಪನ ಸರ್ವೆ ಮೂಲಕ ಅಧಿಕೃತವಾಗಿ ಪ್ರಕಟಿಸಲಾಗಿದೆ. ಕೆರೆ ಒತ್ತುವರಿ ಮಾಡಿ ನಿರ್ಮಿಸಿದ ಮಳಿಗೆಗಳನ್ನು ನೆಲಸಮ ಮಾಡಬೇಕು. ಇದಕ್ಕೆ ಸಹಕಾರ ನೀಡಿದ ನಗರಸಭೆ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್ ಶಿವಕುಮಾರ ಯಾದವ್, ಪ್ರಧಾನ ಕಾರ್ಯದರ್ಶಿ ಕರುಣಾಕರ ರೆಡ್ಡಿ ಗುಂಜಳ್ಳಿ, ಜಾಫರ್ ಶರೀಫ್ ಇದ್ದರು.

Latest Indian news

Popular Stories