ಶಿಕ್ಷಕರಿಗೆ ಬಾಕಿ ವೇತನ ಪಾವತಿಸಲು ಎಸ್ಎಫ್ಐ ಒತ್ತಾಯ

ರಾಯಚೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2022-23ನೇ ಸಾಲಿನಲ್ಲಿ ನೇಮಕವಾದ ರಾಯಚೂರು ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಹಿರಿಯ ಪ್ರಾಥಮಿಕ (6 ರಿಂದ 8 ನೇ ತರಗತಿ ) ಶಾಲಾ ಶಿಕ್ಷಕರಿಗೆ 7 ತಿಂಗಳ ವೇತನ ಪಾವತಿ ಮಾಡುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ವೀರಾಪೂರು ಒತ್ತಾಯಿಸಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ 7ತಿಂಗಳಿಂದ ವೇತನವಿಲ್ಲದೆ ಕಾರ್ಯ ನಿರ್ವಹಿಸಿದ್ದಾರೆ. 7 ತಿಂಗಳು ರಜೆ ಕಳೆದು ಕೆಲ ದಿನಗಳಲ್ಲಿ ಶಾಲೆಗಳು ಪುನರ್ ಆರಂಭವಾಗುತ್ತಿದ್ದರೂ ಶಿಕ್ಷಕರಿಗೆ ವೇತನ ಪಾವತಿಸದಿರುವುದು ಖಂಡನೀಯ.

ಕಳೆದ ವರ್ಷ ರಾಜ್ಯ ಸರ್ಕಾರದಿಂದ 11,734 ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಈ ಪೈಕಿ ರಾಯಚೂರು ಜಿಲ್ಲೆಯ 742 ಶಿಕ್ಷಕರು ನೇಮಕಗೊಂಡಿದ್ದರು.

ಜಿಲ್ಲಾ ಸಾಕ್ಷರತಾ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಎಲ್ಲ ಕೇಸ್ ವರ್ಕಗರ್ಗಳ ಸಭೆ ಕರೆದು ಆನ್ ಲೈನ್ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು.

ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ವೇತನ ವಂಚಿತ ಶಿಕ್ಷಕರು ಕಾರ್ಯನಿರ್ವಹಿಸಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷಾ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳ ನೂತನ ಶಿಕ್ಷಕರಿಗೆ ವೇತನ ಬಿಡುಗಡೆಯಾಗಿದ್ದು, ಈ ಭಾಗದ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಅಸಡ್ಡೆ ಎದ್ದು ಕಾಣುತ್ತಿದೆ.

ಒಂದು ವಾರದಲ್ಲಿ ವೇತನ ಮಾಡದಿದ್ದಲ್ಲಿ ಮೇ 27 ರಂದು ಜಿಲ್ಲಾ ಸಾಕ್ಷರತಾ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Latest Indian news

Popular Stories