ರಾಯಚೂರು |ಬೇಸಿಗೆಯಲ್ಲಿ ಕುಡುಕರ ಫೆವರಿಟ್ ಬಿಯರ್; ಎಪ್ರಿಲ್ ನಲ್ಲಿ ದಾಖಲೆಯ ಮಾರಾಟ

ವರದಿ: ಜಿಲ್ಲಾ ಪ್ರತಿನಿಧಿ

ರಾಯಚೂರು: ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ಗರಿಷ್ಟ 46 ದಾಖಲಾಗಿದ್ದು, ಬಿಸಲಿನ ಝಳದಿಂದ ದೇಹ ತಂಪಾಗಿಸಿಕೊಳ್ಳಲು ಅನೇಕ ಮದ್ಯ ಪ್ರಿಯರು ಬಿಯರ್ ಮೊರೆ ಹೋಗಿದ್ದು, ಏಪ್ರಿಲ್ ನಲ್ಲಿ ಬರೊಬ್ಬರಿ 70,209 ಬಾಕ್ಸ್ ಬಿಯರ್ ಮಾರಾಟವಾಗುವ ಮೂಲಕ ಅಬಕಾರಿ ಇಲಾಖೆಯ ಖಜಾನೆ ತುಂಬಿಸಿದ್ದಾರೆ.

ಬಿಸಿಲಿನಿಂದ ಬಳಲಿದೆ ಅನೇಕರು ತಂಪು ಪಾನಿಯಾ, ಎಳನೀರು ಸೇವನೆ ಮಾಡುವುದು ಸಹಜ. ಆದರೆ ಮದ್ಯ ಪ್ರಿಯರ ಮೊದಲ ಆಯ್ಕೆ ಬಿಯರ್ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಸಿಗೆಯಲ್ಲಿ ಮದ್ಯ ಮಾರಾಟ ಏರಿಕೆಯಾಗದೇ ಅಲ್ಪ ಇಳಿಕೆಯೇ ಆಗಿದೆ. ಆದರೆ ಬಿಯರ್ ಕುಡಿಯುವವರ ಸಂಖ್ಯೆ 2023 ಕ್ಕಿಂತ 2024ರಲ್ಲಿ ಹೆಚ್ಚು ಇದೆ.

ರಾಯಚೂರು ಡಿ‍ಪೊ ವ್ಯಾಪ್ತಿಯಲ್ಲಿ ಮಾನ್ವಿ, ರಾಯಚೂರು ಹಾಗೂ ದೇವದುರ್ಗ ತಾಲ್ಲೂಕು ಬರುತ್ತದೆ. ಮೂರು ತಾಲ್ಲೂಕಿನಲ್ಲಿ ಏಪ್ರಿಲ್ ನಲ್ಲಿ ಒಟ್ಟು 94,957 ಬಾಕ್ಸ್ ಮದ್ಯ ಮಾರಾಟವಾಗಿದೆ. 70,209 ಬಾಕ್ಸ್ ಬಿಯರ್ ಮಾರಾಟವಾಗಿದೆ. 2023 ಏಪ್ರಿಲ್ ಗೆ ಹೋಲಿಸಿದರೆ 94,896 ಬಾಕ್ಸ್ ಮದ್ಯ ಹಾಗೂ 46,553 ಬಾಕ್ಸ್ ಬಿಯರ್ ಮಾರಾಟವಾಗಿತ್ತು.

ಜಿಲ್ಲೆಯಲ್ಲಿ ಬೇಸಿಗೆ ಶುರುವಾಗುವುದು ಫೆಬ್ರುವರಿಯಿಂದಲೇ, ಹೀಗಾಗಿ ಮದ್ಯಪ್ರಿಯರು ಬಾರ್ ಮತ್ತು ರೆಸ್ಟೊರೆಂಟ್ ಗಿಂತ ಹೊಲ ಹಾಗೂ ಗುಡ್ಡಗಾಡು, ಅರಣ್ಯ ಪ್ರದೇಶಗಳಲ್ಲಿ ತಂಡೋಪ ತಂಡವಾಗಿ ಮದ್ಯ ಪಾನ ಮಾಡುವುದು ಸಾಮಾನ್ಯ. 2024ರ ಫೆಬ್ರುವರಿ, ಮಾರ್ಚ್ ಹಾಗೂ ಎಪ್ರಿಲ್ ನಲ್ಲಿ ಅನುಕ್ರಮವಾಗಿ 63,464, 62,679 ಹಾಗೂ 70,209 ಬಾಕ್ಸ್ ಬಿಯರ್ ಮಾರಾಟವಾಗಿದೆ. ಮದ್ಯದ ಮಾರಾಟ ನೋಡಿದರೆ 1,10,527, 1,03,888 ಹಾಗೂ 94957 ಬಾಕ್ಸ್ ಮದ್ಯ ಮಾರಾಟವಾಗಿದೆ.

2023ರಲ್ಲಿ ಜನವರಿ, ಫೆಬ್ರುವರಿ, ಮಾರ್ಚ್, ಎಪ್ರಿಲ್ ಹಾಗೂ ಮೇ ನಲ್ಲಿ ಅನುಕ್ರಮವಾಗಿ 47,379, 62,417, 58,190, ಎಪ್ರಿಲ್ 46553 ಹಾಗೂ ಮೇ ನಲ್ಲಿ 53,965 ಬಿಯರ್ ಮಾರಾಟವಾಗಿತ್ತು.

ಮದ್ಯ ಮಾರಾಟ ನೋಡುವುದಾದರೆ ಜನವರಿಯಿಂದ ಮೇ ವರೆಗೆ ಅನುಕ್ರಮವಾಗಿ 110395, 107979, 114658, 94896 ಹಾಗೂ 99751 ಬಾಕ್ಸ್ ಮದ್ಯ ಮಾರಾಟವಾಗಿತ್ತು.

ಇದರ ಹೊರತಾಗಿ ಕಳೆದ ಡಿಸೆಂಬರ್ ನಲ್ಲಿ ಹೊಸ ವರ್ಷಕ್ಕೆ ಸ್ವಾಗತಿಸುವ ನೆಪದಲ್ಲಿ 1,25,497 ಗರಿಷ್ಠ ಮದ್ಯ ಮಾರಾಟವಾದರೆ 62,164 ಬಿಯರ್ ಬಾಕ್ಸ್ ಪಾನಪ್ರಿಯರ ಹೊಟ್ಟೆ ಸೇರಿದೆ.

ರಾಯಚೂರು ಆಂದ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವ ಕಾರಣ ಪಕ್ಕದ ರಾಜ್ಯಗಳ ಮದ್ಯ ಕಡಿಮೆ ದರದಲ್ಲಿ ಬರುತ್ತಿವೆ. ಮತ್ತೊಂದೆಡೆ ಹೊರ ರಾಜ್ಯದಿಂದ ಕಲಬೆರಕೆ ಮದ್ಯ ಹೆಚ್ಚು ಬರುತ್ತಿರುವ ಕಾರಣದಿಂದ ಮದ್ಯಪ್ರಿಯರು ಹೆಚ್ಚು ಬಿಯರ್ ಕುಡಿಯುತ್ತಿದ್ದರಿಂದ ಮಾರಾಟದಲ್ಲಿ ಹೆಚ್ಚಾಗಲು ಮುಖ್ಯ ಕಾರಣ ಎಂದು ಪಾನಪ್ರಿಯರು.

ಯಾವುದೇ ಮದ್ಯ ಸೇವೆನೆ ಹಾನಿಕಾರಕವೇ. ಆದರೆ ಬಿಯರ್ ನಲ್ಲಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಇರುವ ಕಾರಣ ರಾಜ್ಯದಲ್ಲಿ ಬೇಸಿಗೆಯಲ್ಲಿ ಬಿಯರ್ ಟ್ರೆಂಡ್ ಇರುವಂತೆ ರಾಯಚೂರಿನಲ್ಲಿಯೂ ಟ್ರೆಂಡ್ ಕಾಯ್ದುಕೊಂಡಿದೆ’ ಎನ್ನುತ್ತಾರೆ ಜಿಲ್ಲಾ ಅಬಕಾರಿ ಉಪ ಆಯುಕ್ತ ರಮೇಶ.

Latest Indian news

Popular Stories