‘ಕೋವಿಡ್ ಲಸಿಕೆಯ ಅಡ್ಡಪರಿಣಾಮಕ್ಕೆ ಗುರಿಯಾದವರಿಗೆ ಸರ್ಕಾರ ನೆರವು ನೀಡಬೇಕು: ಆರ್ ಮಾನಸಯ್ಯ

ರಾಯಚೂರು: ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮದಿಂದ ಟ್ರಾಂಬೊಸಿಸ್ ವಿತ್ ಟ್ರಾಂಬೊ ಸೈಕೋಪಿಯನ್ ಸಿನ್ಸೂಮ್ಸ್ (ಟಿಟಿಎಸ್) ರೋಗಕ್ಕೆ ತುತ್ತಾದ ಹುಸೇನಪ್ಪ ಗೆಜ್ಜಲಗಟ್ಟ ಅವರ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾಡಳಿತದಿಂದ ಅಗತ್ಯ ಸಹಕಾರದಿಂದ ಪ್ರಾಣ ರಕ್ಷಿಸಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ-ಲೆನಿನ್‌ವಾದಿ) ರೆಡ್ ಸ್ಟಾರ್‌ ರಾಜ್ಯ ಮುಖಂಡ ಆರ್ ಮಾನಸಯ್ಯ ಒತ್ತಾಯಿಸಿದರು.

ಕಳೆದ ಮೇ 9ರಂದು ನಡೆದುಕೊಂಡೇ ರಿಮ್ಸ್ ಆಸ್ಪತ್ರೆಗೆ ಬಂದಿದ್ದ ಹುಸೇನಪ್ಪ 1 ತಾಸಿನೊಳಗೆ ಶ್ವಾಸಕೋಶ ಸಮಸ್ಯೆ, ರಕ್ತ ಹೆಪ್ಪುಗಟ್ಟುವಿಕೆ, ಪ್ರಜ್ಞಾ ಹೀನ ಸ್ಥಿತಿಗೆ ತಲುಪಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದಕ್ಕೆ ಕೋವಿಶೀಲ್ಡ್ ಲಸಿಕೆ ಅಡ್ಡಪರಿಣಾಮವೇ ಕಾರಣವಾಗಿದೆ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ದೂರಿದರು.

ಆಸ್ಟ್ರಾಜೆನೆಕಾ ಕಂಪನಿಯು ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಬ್ರಿಟನ್ ನ್ಯಾಯಾಲಯ ಒಂದರಲ್ಲಿ ದೃಢಪಡಿಸಿದೆ. ಸಾಕಷ್ಟು ಪೂರ್ವ ಪರೀಕ್ಷೆಗಳಿಲ್ಲದೆ ಇದನ್ನು ಜನಗಳ ಮೇಲೆ ಬಲತ್ಕಾರದಿಂದ ಪ್ರಯೋಗಿಸಿದ ಕೇಂದ್ರ ಸರ್ಕಾರವೇ ಇದಕ್ಕೆ ಹೊಣೆಯಾಗಿದೆ. ಹಾಗಾಗಿ ರಾಯಚೂರು ಜಿಲ್ಲೆಯಲ್ಲಿಯೆ ಟಿಟಿಎಸ್ ಗೆ ಗುರಿಯಾದ ಮೊಟ್ಟಮೊದಲ ಬಲಿಪಶು ಹುಸೇನಪ್ಪ ಗೆಜ್ಜಲಗಟ್ಟ ಅವರು, ಇವರ ಪ್ರಾಣವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ.

ಈಗಾಗಲೇ ಹುಸೇನಪ್ಪನವರ ಪತ್ನಿ ಬಳ್ಳಮ್ಮ ಮೇ 16ರಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಇದರ ಆಧಾರದ ಮೇಲೆ ಆಸ್ಪಾಚನೆಕಾ ಹಾಗೂ ಸೀರಂ ಇನ್ವೆಟ್ಯೂಟ್ ಆಫ್ ಇಂಡಿಯಾ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನಾವು ಒತ್ತಾಯಸುತ್ತೇವೆ ಎಂದರು.

ಕೋವಿಡ್-19 ತಡೆಗಟ್ಟುವ ಹೆಸರಲ್ಲಿ ದೇಶದ ಶೇ 70 ಜನರಿಗೆ ಕಡ್ಡಾಯವಾಗಿ ಲಸಿಕೆ ಕೊಡಲಾಯಿತು. ಲಸಿಕೆ ಹಾಕಿಸಿಕೊಳ್ಳದಿದ್ದರೆ ಸರ್ಕಾರಿ ಸೌಲಭ್ಯ ರದ್ದು ಮಾಡುವ ಬೆದರಿಕೆ ಹಾಕಲಾಯಿತು. ಸರ್ಕಾರದ ಆದೇಶದ ಮೇರೆಗೆ 2021ರ ಅಕ್ಟೋಬರ್ 22 ಹಾಗೂ 2022ರ ಫೆಬ್ರುವರಿ 11ರಂದು ಹುಸೇನಪ್ಪ ಎರಡು ಕೋವಿಶಿಲ್ಡ್ ಲಸಿಗೆ ಹಾಕಿಸಿಕೊಂಡಿದ್ದಾರೆ. ರಿಮ್ಸ್ ಆಸ್ಪತ್ರೆಗೆ ದಾಖಲಾಗುವ ಮುಂಚೆ ತೀವ್ರ ತಲೆನೋವು, ಹೊಟ್ಟೆ ನೋವು, ವಾಂತಿ, ಜ್ವರ ಹಾಗೂ ಕೈಕಾಲು ಊತ ಕಾಣಿಸಿಕೊಂಡಿವೆ. ಇವು ಟಿಟಿಎಸ್ ನ ಪ್ರಾಥಮಿಕ ಲಕ್ಷಣಗಳಾಗಿವೆ. ಆಸ್ಪತ್ರೆಗೆ ದಾಖಲಾದ ಮೇಲೆ ರಕ್ತ ಹೆಪ್ಪುಗಟ್ಟುವಿಕೆ, ಹೃದಯ ನಿಲುಗಡೆ, ಶ್ವಾಸಕೋಶ ಸ್ಥಗಿತ. ಮೆದುಳು ನಿಷ್ಕ್ರಿಯ ಹಾಗೂ ಕಿಡ್ನಿ ಲಿವರ್ ಮುಂತಾದ ಗಂಭೀರ ಪರಿಣಾಮಗಳಿಂದ ಈತ ಜೀವಂತ ಹೆಣವಾಗಿದ್ದಾನೆ ಎಂದು ಆರೋಪಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ, ರಿಮ್ಸ್ ನಿರ್ದೇಶಕರಿಗೆ ಹುಸೇನಪ್ಪನ ಪತ್ನಿ ಬುಳ್ಳಮ್ಮ ದೂರು ನೀಡಿ ನೆರವಿಗೆ ಬೇಡಿಕೊಂಡಿದ್ದರೂ ಇದುವರೆಗೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಂಡಿಲ್ಲ. ಪರ್ಯಾಯವಾಗಿ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಟಿಟಿಎಸ್ ವಿಷಯದಲ್ಲಿ ತುರ್ತು ಕ್ರಮ ಘೋಷಿಸಬೇಕು. ಇದರ ಅಡ್ಡ ಪರಿಣಾಮದಿಂದ ಜನರನ್ನು ರಕ್ಷಿಸಲು ಬೇಕಾದ ಅಗತ್ಯ ವೈದ್ಯಕೀಯ ವ್ಯವಸ್ಥೆಯನ್ನು ಸಮರೋಪಾದಿಯಲ್ಲಿ ಮಾಡಬೇಕು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಟಿಟಿಎಸ್ ಸಾಂತ್ವಾನ ಉನ್ನತಾ ಚಿಕಿತ್ಸಾ ಕೇಂದ್ರ ತೆರೆಯಬೇಕು. ಇದರ ಪ್ರಾಥಮಿಕ ಲಕ್ಷಣ ಗುರುತಿಸುವ ಸಮೀಕ್ಷೆ ಆರಂಭಿಸಬೇಕು. ಸರ್ಕಾರ ಈ ಕುರಿತು ಪ್ರಕಟಣೆ ಹೊರಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಪಕ್ಷದ ಮುಖಂಡರಾದ ಎಂ. ಗಂಗಾಧರ, ಜಿ.ಅಮರೇಶ, ಅಜೀಜ್ ಜಾಗೀರದಾರ್ ಉಪಸ್ಥಿತರಿದ್ದರು.

Latest Indian news

Popular Stories