ದೇವಸ್ಥಾನದ ವತಿಯಿಂದ ಮಸೀದಿಯಲ್ಲಿ ಇಫ್ತಾರ್: ಸೌಹರ್ದತೆಗೆ ಸಾಕ್ಷಿಯಾದ ಬಂಟ್ವಾಳದ ಪಾಟ್ರಕೋಡಿ


ಮಂಗಳೂರು: ಧಾರ್ಮಿಕ ಕಲಹಗಳಿಗೇ ಸುದ್ದಿಯಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಮತೀಯ ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲದ ಶ್ರಿ ಉಲ್ಲಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಮಂಡಳಿಯು ದೈವಸ್ಥಾನದ ಸಮೀಪದ ಪಾಟ್ರಕೋಡಿಯ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ನಡೆಸುವ ಮೂಲಕ ಜಿಲ್ಲೆಯ ಧಾರ್ಮಿಕ ಸೌಹಾರ್ದವನ್ನು ಗಟ್ಟಿಗೊಳಿಸಿದ್ದಾರೆ.


ಅಂದ ಹಾಗೇ ಈ ಇಫ್ತಾರ್ ಕೂಟದ ಹಿಂದೆ ಒಂದು ಸೌಹಾರ್ದದ ಕಥೆ ಇದೆ. ಶ್ರೀ ಉಲ್ಲಾಕ್ಲು ಧೂಮಾವತಿ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವ ನಡೆದಿತ್ತು. ಈ ಸಂದರ್ಭದಲ್ಲಿ ಪಾಟ್ರಕೋಡಿಯ ಮುಸ್ಲಿಂ ಯುವಕರು ಅಲ್ಲಿ ಸ್ವಯಂ ಸೇವೆ, ಬ್ಯಾನರ್ ಅಳವಡಿಸುವುದು ಸಹಿತ ಕಾರ್ಯಕ್ರಮಕ್ಕೆ ನೆರವಾಗಿದ್ದರು. ಇದು ಅಲ್ಲಿನ ಆಡಳಿತ ಮಂಡಳಿಗೂ ಭಾರೀ ಖುಷಿಯನ್ನು ತಂದಿತ್ತು. ಇದಕ್ಕೆ ಕೃತಜ್ಞತೆ ಎಂಬಂತೆ ಆದಿತ್ಯವಾರ ಪಾಟ್ರಕೋಡಿಯ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು. ಅಂದಿನ ಇಫ್ತಾರ್ ಕೂಟದ ಸಂಪೂರ್ಣ ಖರ್ಚನ್ನು ದೈವಸ್ಥಾನದ ಆಡಳಿತ ಮಂಡಳಿ ವಹಿಸಿಕೊಂಡಿತ್ತು.

1000793386 Special Stories


ವಿಶೇಷ ಎಂದರೆ ಸಾಮಾನ್ಯವಾಗಿ ಇಫ್ತಾರ್ ಕಾರ್ಯಕ್ರಮಗಳನ್ನು ಮಾಂಸದಡುಗೆಯ ಮೂಲಕ ಮಾಡುತ್ತಾರೆ. ಆದರೆ ಈ ಇಫ್ತಾರನ್ನು ಮಸೀದಿಯ ಆಡಳಿತ ಕಮಿಟಿಯವರು ಸಸ್ಯಾಹಾರದ ಅಡುಗೆಯ ಮೂಲಕ ಮಾಡಿಕೊಂಡಿದ್ದಾರೆ. ಅಲ್ಲದೇ ಮಸೀದಿ ಆವರಣದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಖುದ್ದು ದೈವಸ್ಥಾನದ ಆಡಳಿತ ಮಂಡಳಿಯವರು ಭಾಗವಹಿಸಿ ಸಂತಸ ಹಂಚಿಕೊಂಡರು.


ಇಫ್ತಾರ್‌ಗೆಂದು ಆಗಮಿಸಿದ ದೈವಸ್ಥಾನದ ಆಡಳಿತ ಮಂಡಳಿಯ ಸದಸ್ಯರನ್ನು ಮಸೀದಿಯ ಪದಾಧಿಕಾರಿಗಳು ಶಾಲು ಹೊದಿಸಿ ಗೌರವಿಸಿದರು. ನೂರಾರು ಮಂದಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು, ಧಾರ್ಮಿಕ ಸಾಮರಸ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು.

ಪರಸ್ಪರ ಅರಿತು, ಒಗ್ಗಟ್ಟಾಗಿ ಬಾಳುವುದೇ ಚಂದ. ಜಾತಿಯ ಧರ್ಮಕ್ಕಿಂತಲೂ ಮಾನವ ಧರ್ಮ ಮುಖ್ಯ. ಈ ನಿಟ್ಟಿನಲ್ಲಿ ಪರಸ್ಪರ ಎಲ್ಲ ಧರ್ಮದವರೂ ಸಹಕಾರದ ಮನೋಭಾವದೊಂದಿಗೆ ಬಾಳಬೇಕು. ಹೀಗೆ ಬಾಳಿದರೆ ದೇಶ ಮತ್ತಷ್ಟು ಸದೃಢವಾಗುತ್ತದೆ ಎಂದು ದೈವಸ್ಥಾನದ ಆಡಳಿತ ಮಂಡಳಿಯ ಆಧ್ಯಕ್ಷ ಕೃಷ್ಣ ಭಟ್ ಹೇಳಿದ್ದಾರೆ.

1000793380 Special Stories

ದೈವಸ್ಥಾನ ಬ್ರಹ್ಮಕಲಶಕ್ಕೆ ನಾವು ಯುವಕರೆಲ್ಲಾ ಸೇರಿ ಸಹಕರಿಸಿದ್ದೇವೆ. ದೈವಸ್ಥಾನದ ಆಡಳಿತ ಮಂಡಳಿ ವತಿಯಿಂದ ಆದಿತ್ವವಾರ ಮಸೀದಿಯಲ್ಲಿ ಇಫ್ತಾರ್ ಮಾಡಲಾಗಿದೆ. ಆಡಳಿತ ಮಂಡಳಿಯವರುನ್ನು ನಾವು ಆತ್ಮೀಯವಾಗಿ ಬರಮಾಡಿಕೊಂಡಿದ್ದೇವೆ. ಈ ಸೌಹಾರ್ದ ಕೆಡದಂತೆ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಸೀದಿಯ ಅಧ್ಯಕ್ಷ ಬಾತಿಶಾ ಹೇಳಿದ್ದಾರೆ.

1000793383 Special Stories

Latest Indian news

Popular Stories