ಊರ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ನದಿಗೆ ಸೇತುವೆ ಕಟ್ಟಿದ ವೆಲ್ಡಿಂಗ್ ಕಾರ್ಮಿಕ ನಜೀಬ್

ತಿರುವನಂತಪುರಂ: ಸಮಾಜಕ್ಕೆ ಏನಾದರೂ ಕೊಡುಗೆ
ನೀಡಬೇಕು ಎನ್ನುವವರು ತುಂಬಾ ವಿರಳ. ಅದಕ್ಕಾಗಿ ದೊಡ್ಡ ಮನಸ್ಸು ಬೇಕು. ಕೋಟಿಗಟ್ಟಲೇ ಹಣ ಇಟ್ಟುಕೊಂಡಿರುವವರೇ ಬಿಡಿಗಾಸು ಬಿಚ್ಚಲು ಹಿಂದು-ಮುಂದು ನೋಡುವಾಗ ಇಲ್ಲೊಬ್ಬ
ವ್ಯಕ್ತಿ ಊರೂರು ಅಲೆದು ಹಣ ಸಂಗ್ರಹ ಮಾಡಿ, ಮಕ್ಕಳ ಓದಿಗೆ ನೆರವಾಗಲು ಮಹತ್ಕಾರ್ಯವನ್ನು ಮಾಡಿದ್ದಾರೆ.

ಭಾರಿ ಮಳೆಗೆ ಸೇತುವೆ ಕುಸಿದಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿರಲಿಲ್ಲ. ಸ್ಥಳೀಯರು ಕೂಡ ಗಮನ ಹರಿಸಲಿಲ್ಲ. ಇದರಿಂದಾಗಿ ಮಕ್ಕಳ ಓದಿಗೆ ತುಂಬಾ ಕಷ್ಟವಾಗಿತ್ತು. ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು. ಆದರೆ, ಈ ವ್ಯಕ್ತಿ ಮಾಡಿದ ಪುಣ್ಯ ಕೆಲಸದಿಂದಾಗಿ ಸಾಕಷ್ಟು ಮಂದಿಗೆ ಒಳ್ಳೆಯದಾಗುತ್ತಿದೆ.
ನಮ್ಮ ಈ ಸ್ಟೋರಿಯ ನಿಜವಾದ ಹೀರೋ ಯಾರೆಂದರೆ ಅದು ವೆಲ್ಡಿಂಗ್ ಕೆಲಸಗಾರ ಕೆ.ಇ.ನಜೀಬ್. ಚಂದಾ ಸಂಗ್ರಹಿಸಿ, ಅದರಿಂದ ಬಂದ ಹಣದ ಮೂಲಕ ಮತ್ತೊಂದು ಸೇತುವೆ ನಿರ್ಮಿಸಿ ಮಕ್ಕಳ ಓದಿಗೆ ನೆರವಾಗಿದ್ದಾರೆ.

2021 ರಲ್ಲಿ ಭಾರೀ ಮಳೆಯ ಸಮಯದಲ್ಲಿ ನದಿ ಉಬ್ಬಿದಾಗ,ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳನ್ನು ಸಂಪರ್ಕಿಸುವ ಎಂಥಾಯರ್ ಮುಕ್ಕುಳಂ ಸೇತುವೆ ನಾಶವಾಯಿತು. ಇದರಿಂದ ಜನರಿಗೆ ಓಡಾಡಲು ತುಂಬಾ ಕಷ್ಟವಾಯಿತು. ನಿವಾಸಿಗಳು ಇನ್ನೊಂದು ಬದಿಯನ್ನು ತಲುಪಲು ಹೆಚ್ಚುವರಿ ಏಳು ಕಿಮೀಪ್ರಯಾಣಿಸಬೇಕಾಯಿತು. 160 ರೂ.ವರೆಗೆ ಆಟೋ ದರ ನೀಡಿ ಗೃಹೋಪಯೋಗಿ ಸಾಮಾನುಗಳನ್ನು ಖರೀದಿಸಲು ಹಲವರು ಪಟ್ಟಣಕ್ಕೆ ತೆರಳುತ್ತಿದ್ದರು. ಶಾಲೆಗಳು ಪುನರಾರಂಭವಾಗಬೇಕು ಎಂದಾಗ ಗ್ರಾಮಸ್ಥರು ತಾತ್ಕಾಲಿಕ ಸೇತುವೆ ನಿರ್ಮಿಸಲು ಯೋಚಿಸಿದರು. ಮರದ ಸೇತುವೆ ನಿರ್ಮಾಣಕ್ಕೆ ಪಂಚಾಯಿತಿ ಪ್ರಯತ್ನ ನಡೆಸಿತ್ತು. ಆದರೆ ಅದು ಕೆಲಸ ಮಾಡಲಿಲ್ಲ. ಜೂನ್ 3ರಂದು ಶಾಲೆ ತೆರೆಯಲು ಮುಂದಾದಾಗ ಕಬ್ಬಿಣದಿಂದ ಸೇತುವೆ ನಿರ್ಮಿಸುವ ಆಲೋಚನೆಯೊಂದಿಗೆ ನಜೀಬ್, ಸ್ಥಳೀಯರು ಮತ್ತು ಪಂಚಾಯಿತಿಯನ್ನು ಸಂಪರ್ಕಿಸಿದರು. ಬಳಿಕ ಚಂದಾ ಸಂಗ್ರಹಿಸಿ ಸೇತುವೆ ನಿರ್ಮಾಣ ಮಾಡಿದ್ದಾರೆ. ಸುಮಾರು 1.25 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ನಜೀಬ್ ಒಂದು ರೂಪಾಯಿ ಕೂಲಿ ಶುಲ್ಕ ಪಡೆದಿಲ್ಲ.

ಕೊಕ್ಕಯಾರ್ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯ ಪಿ.ವಿ. ವಿಶ್ವನಾಥನ್ ಹಾಗೂ ಅಧ್ಯಕ್ಷೆ ಮೊಲಿ ಡೊಮೆನಿಕ್ ಸೇತುವೆ ನಿರ್ಮಾಣಕ್ಕೆ ನಿಧಿ ಸಂಗ್ರಹಣೆಗೆ ಚಾಲನೆ ನೀಡಿದರು. ಕೂಟ್ಟಿಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿನೋಯ್ ಜೋಸ್, ವಾರ್ಡ್ ಸದಸ್ಯೆ ಮಾಯಾ ಜಯೇಶ್,ಎಂಥಾಯ‌ ವರ್ತಕರು ಮೊದಲಾದವರು ಧನಸಹಾಯ ಮಾಡಿದರು. ಇವರ ಈ ಮಾನವೀಯ ಸೇವೆಗೆ ನಮ್ಮದೊಂದು ಸಲಾಮ್

Latest Indian news

Popular Stories