ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರೋಚಕ ಐಪಿಎಲ್ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 3 ವಿಕೆಟ್ಗಳ ಜಯ ಸಾಧಿಸಿತು. ಕೊನೆಯ ಓವರ್ ನಲ್ಲಿ ಕೋಲ್ಕತ್ತಾದ ಬ್ಯಾಟ್ಸ್ ಮ್ಯಾನ್ ಸಿಕ್ಸರ್ ಗಳ ಮಳೆ ಸುರಿಸಿ ಪಂದ್ಯದ ದಿಕ್ಕು ಬದಲಿಸಿ ಜಯದ ಸಂಭ್ರಮ ತಂದಿಟ್ಟರು.
ಗುಜರಾತ್ ಟೈಟಾನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ್ದ ಬರೋಬ್ಬರಿ 204 ರನ್ ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು. ಭಾನುವಾರದ ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು.
ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 4 ವಿಕೆಟ್ ನಷ್ಟಕ್ಕೆ 204 ರನ್ ಕಲೆ ಹಾಕಿತು. ಸಹಾ 17, ಶುಭಮನ್ ಗಿಲ್ 39, ಸಾಯಿ ಸುದರ್ಶನ್ ಅವರ ಅರ್ಧ ಶತಕ 53, ಅಭಿನವ್ ಮನೋಹರ್ 14 ಮತ್ತು ಅಬ್ಬರಿಸಿದ ವಿಜಯ್ ಶಂಕರ್ ಔಟಾಗದೆ 24 ಎಸೆತಗಳಲ್ಲಿ 63 ರನ್ ಚಚ್ಚಿದರು. ನರೈನ್ 3 ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 28 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿತು. ರಹಮಾನುಲ್ಲಾ ಗುರ್ಬಾಜ್ 15, ಎನ್ ಜಗದೀಶನ್ 6 ರನ್ ಗಳಿಸಿ ಔಟಾದರು. ಅಬ್ಬರಿಸಿದ ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ 83 ರನ್ ಗಳಿಸಿ ಔಟಾದರು. ನಾಯಕ ನಿತೀಶ್ ರಾಣಾ 45 ರನ್ ಕೊಡುಗೆ ನೀಡಿದರು.
16 ನೇ ಓವರ್ ಎಸೆದ ಅಫ್ಘಾನ್ ಸ್ಪಿನ್ ದಿಗ್ಗಜ ರಶೀದ್ ಖಾನ್ ಅವರು ಹ್ಯಾಟ್ರಿಕ್ ಪಡೆದರು. ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್ ಅವರ ವಿಕೆಟ್ ಪಡೆದು ಪಂದ್ಯದಲ್ಲಿ ದೊಡ್ಡ ತಿರುವು ಮೂಡಿಸಿ ಕೆಕೆಆರ್ ಬಳಗದಲ್ಲಿ ಭಯ ಮೂಡಿಸಿದರು.
ಆದರೆ ಆ ಬಳಿಕ ಆಟವಾಡಿದ ರಿಂಕು ಸಿಂಗ್ ಜಯ ತಂದಿಟ್ಟರು. 21 ಎಸೆತಗಳಲ್ಲಿ 48 ರನ್ ಗಳಿಸಿದ ರಿಂಕು ಸಿಂಗ್ 1 ಬೌಂಡರಿ ಮತ್ತು 6 ಅತ್ಯಮೋಘ ಸಿಕ್ಸರ್ ಸಿಡಿಸಿದರು. ಯಶ್ ದಯಾಳ್ ಅವರು ಎಸೆದ ಕೊನೆಯ ಓವರ್ ನಲ್ಲಿ ಕೆಕೆಆರ್ ಗೆ ಗೆಲ್ಲಲು 29 ರನ್ ಗಳ ಅಗತ್ಯವಿತ್ತು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ರಿಂಕು 5 ಸಿಕ್ಸರ್ ಸಿಡಿಸಿ ಗೆಲುವಿಗೆ ಪ್ರಮುಖ ಕಾರಣವಾದರು. ಯಶ್ ದಯಾಳ್ ಅವರು ಎಸೆದ 4 ಓವರ್ ಗಳಲ್ಲಿ 69 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದರು.
ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ 5 ವಿಕೆಟ್ಗಳಿಂದ ಚೆನ್ನೈಯನ್ನು ಮಣಿಸಿತ್ತು. ಬಳಿಕ ಡೆಲ್ಲಿ ವಿರುದ್ಧ 6 ವಿಕೆಟ್ ಜಯ ಸಾಧಿಸಿತ್ತು. ಎರಡೂ ಚೇಸಿಂಗ್ ಪಂದ್ಯಗಳಾಗಿದ್ದವು.
ಪಂಜಾಬ್ ಎದುರಿನ 7 ರನ್ನುಗಳ ಮಳೆ ಸೋಲಿನ ಬಳಿಕ ಅಮೋಘ ಚೇತರಿಕೆ ಕಂಡ ತಂಡ ಕೆಕೆಆರ್. ತವರಿನ ಈಡನ್ ಅಂಗಳದಲ್ಲಿ ಅದು ಆರ್ಸಿಬಿಗೆ ಸೋಲಿನ ಭಾರಿ ಶಾಕ್ ನೀಡಿತ್ತು.