ಕೊಹ್ಲಿ ಶತಕ, 438 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ; ವಿಂಡೀಸ್ ದಿಟ್ಟ ಉತ್ತರ

ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಸುಲಭ ತುತ್ತಾಗಿದ್ದ ವೆಸ್ಟ್ ಇಂಡೀಸ್ (India vs West Indies), ಎರಡನೇ ಟೆಸ್ಟ್‌ನಲ್ಲಿ ಹೋರಾಟದ ಮನೋಭಾವ ತೋರುತ್ತಿದೆ. ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಎರಡನೇ ದಿನವೂ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂತು. ಟೀಂ ಇಂಡಿಯಾ (Team India) ಪರ ವಿರಾಟ್ ಕೊಹ್ಲಿ (Virat Kohli) ತಮ್ಮ 29 ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರೆ, ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ (Ravindra Jadeja) ಹಾಗೂ ರವಿಚಂದ್ರನ್ ಅಶ್ವಿನ್ (Ravichandran Ashwin) ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹೀಗಾಗಿ ಟೀಂ ಇಂಡಿಯಾ ಎರಡನೇ ದಿನದ ಎರಡನೇ ಸೆಷನ್ ಅಂತ್ಯಕ್ಕೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 438 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಇನ್ನು ಮೂರನೇ ಸೆಷನ್​ನಲ್ಲಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್, ಕೇವಲ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ.

ಶುಕ್ರವಾರದಂದು ಉಭಯ ತಂಡಗಳ ಬ್ಯಾಟ್ಸ್​ಮನ್​ಗಳು ಕ್ವೀನ್ಸ್ ಪಾರ್ಕ್ ಓವಲ್ ಮೈದಾನದ ಪರಿಸ್ಥಿತಿಯ ಲಾಭ ಪಡೆದರು. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಶತಕ ಪೂರೈಸಿದರೆ , ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ಅರ್ಧಶತಕ ಸಿಡಿಸಿದರು. ಈ ರೀತಿಯಾಗಿ, ಟೀಂ ಇಂಡಿಯಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ 5 ಬ್ಯಾಟ್ಸ್‌ಮನ್‌ಗಳು ಐವತ್ತು ಅಥವಾ ಅದಕ್ಕೂ ಹೆಚ್ಚಿನ ರನ್ ಕಲೆಹಾಕಿದರು. ಇದಕ್ಕೆ ಪ್ರತ್ಯುತ್ತರವಾಗಿ ವೆಸ್ಟ್ ಇಂಡೀಸ್ ಆರಂಭಿಕರು ಬಲಿಷ್ಠ ಆರಂಭ ನೀಡಿ ಭಾರತೀಯ ಬೌಲರ್​ಗಳ ವಿರುದ್ಧ ಮೇಲುಗೈ ಸಾಧಿಸಿದರು.

ಮೂರನೇ ಸೆಷನ್​ ಆರಂಭದೊಂದಿಗೆ ವೆಸ್ಟ್ ಇಂಡೀಸ್ ಕೂಡ ತನ್ನ ಮೊದಲ ಇನಿಂಗ್ಸ್ ಆರಂಭಿಸಿತು. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಂತೆ ಮತ್ತೊಮ್ಮೆ ಆರಂಭಿಕ ಜೋಡಿ ಕ್ರೇಗ್ ಬ್ರಾಥ್‌ವೈಟ್ (ಅಜೇಯ 37) ಮತ್ತು ತೇಜ್ನರ್ ಚಂದ್ರಪಾಲ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಬಾರಿ ಇಬ್ಬರೂ ಡೊಮಿನಿಕಾ ಟೆಸ್ಟ್‌ಗಿಂತ ಉತ್ತಮ ಪ್ರದರ್ಶನ ನೀಡಿ 71 ರನ್‌ಗಳ ಪ್ರಬಲ ಜೊತೆಯಾಟ ನಡೆಸಿದರು.

ಹೀಗಾಗಿ ಟೀಂ ಇಂಡಿಯಾ ಕೂಡ 34 ಓವರ್‌ಗಳವರೆಗೆ ವಿಕೆಟ್‌ಗಾಗಿ ಕಾಯಬೇಕಾಯಿತು. ಆದರೆ ಅಂತಿಮವಾಗಿ ರವೀಂದ್ರ ಜಡೇಜಾ 35 ನೇ ಓವರ್‌ನಲ್ಲಿ ಚಂದ್ರಪಾಲ್ (33) ಅವರ ವಿಕೆಟ್ ಉರುಳಿ, ಭಾರತಕ್ಕೆ ಮೊದಲ ಯಶಸ್ಸನ್ನು ತಂದುಕೊಟ್ಟರು. ಇದೀಗ ಭಾರತ ನೀಡಿರುವ ಗುರಿಯಲ್ಲಿ 352 ರನ್​ಗಳಿಂದ ಹಿಂದಿರುವ ವಿಂಡೀಸ್ ಬಳಗ ಮೂರನೇ ದಿನದಾಟದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Latest Indian news

Popular Stories