ಕೇಪ್ ಟೌನ್: 2023ರ ವನಿತಾ ಟಿ20 ವಿಶ್ವಕಪ್ ನ ಮೊದಲ ಶತಕ ದಾಖಲಾಗಿದೆ. ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ನಲ್ಲಿ ನಡೆದ ಪಾಕಿಸ್ಥಾನ ಮತ್ತು ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಪಾಕ್ ಆರಂಭಿಕ ಆಟಗಾರ್ತಿ ಮುನೀಬಾ ಅಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ಕೂಟದ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಪಾಕಿಸ್ಥಾನ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕ್ ವನಿತೆಯರು ಐದು ವಿಕೆಟ್ ನಷ್ಟಕ್ಕೆ 165 ರನ್ ಮಾಡಿದರೆ, ಐರ್ಲೆಂಡ್ ತಂಡವು 16.3 ಓವರ್ ಗಳಲ್ಲಿ ಕೇವಲ 95 ರನ್ ಗೆ ಆಲೌಟಾಯಿತು.
ಪಾಕ್ ತಂಡದ ಆರಂಭಿಕ ಆಟಗಾರ್ತಿ, ವಿಕೆಟ್ ಕೀಪರ್ ಬ್ಯಾಟರ್ ಮುನೀಬಾ 68 ಎಸೆತಗಳಲ್ಲಿ 102 ರನ್ ಗಳಿಸಿದರು. ಈ ಶತಕದ ಇನ್ನಿಂಗ್ಸ್ ನಲ್ಲಿ ಅವರು 14 ಬೌಂಡರಿ ಬಾರಿಸಿದ್ದರು. ಅಲಿ ಹೊರತು ಪಡಿಸಿದರೆ ಎರಡಂಕಿ ಮೊತ್ತ ದಾಖಲಿಸಿದ್ದು ನಿದಾ ದರ್ ಒಬ್ಬರೆ. ಅವರು 33 ರನ್ ಹೊಡೆದರು.
ಮುನೀಬಾ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಪಾಕಿಸ್ತಾನಿ ಮಹಿಳೆ ಎನಿಸಿಕೊಂಡರು. ಅಲ್ಲದೆ ಟಿ20 ವಿಶ್ವಕಪ್ ನಲ್ಲಿ ಶತಕ ಬಾರಿಸಿದ ಆರನೇ ಮಹಿಳೆ ಎಂಬ ಸಾಧನೆ ಮಾಡಿದರು.