70 ಮೀ. ಬೌಂಡರಿ, ಪಿಚ್ ಮೇಲೆ ಹುಲ್ಲು’; ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಗಾಗಿ ಐಸಿಸಿ ಪ್ರೋಟೋಕಾಲ್; ಈ ಬಾರಿ ಬೌಲರ್ ಗಳದ್ದೇ ಮೇಲುಗೈ?

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ 2023ಕ್ಕೆ ಭರದ ಸಿದ್ದತೆ ನಡೆಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ, ಮಹತ್ವದ ಟೂರ್ನಿಗಾಗಿ ಪ್ರೋಟೋಕಾಲ್ ಬಿಡುಗಡೆ ಮಾಡಿದ್ದು, ಪಿಚ್ ಕ್ಯುರೇಟರ್ ಗಳಿಗೆ ಮಹತ್ವದ ಸೂಚನೆ ನೀಡಿದೆ.

ಹೌದು.. ಈ ಬಾರಿ ಎಂದಿನಂತೆ ಕ್ರಿಕೆಟ್ ವಿಶ್ವಕಪ್ ನಲ್ಲಿ ಬ್ಯಾಟ್ಸ್ ಮನ್ ಗಳ ಅಬ್ಬರಕ್ಕೆ ಕಡಿವಾಣ ಬೀಳಬಹದು. ಬೌಲರ್ ಗಳ ಆರ್ಭಟ ಜೋರಾಗಿ ಕೇಳಲಿದ್ದು, ಈ ಬಾರಿ ಅಂತಹುದೊಂದು ಯೋಜನೆಗೆ ಐಸಿಸಿ ಸಿದ್ಧತೆ ನಡೆಸಿದೆ. ಈ ಮಹತ್ವದ ಟೂರ್ನಿಗಾಗಿ ಐಸಿಸಿ ಪ್ರೋಟೋಕಾಲ್ ಬಿಡುಗಡೆ ಮಾಡಿದ್ದು, ಈ ಪ್ರೋಟೋಕಾಲ್ ನಲ್ಲಿ ಪಿಚ್ ಕ್ಯುರೇಟರ್ ಗಳಿಗೆ ಮಹತ್ವದ ಸೂಚನೆ ನೀಡಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಈ ವಿಶ್ವಕಪ್ 2023ರಲ್ಲಿ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಐಸಿಸಿ ಟಾಸ್ ಮತ್ತು ಇಬ್ಬನಿಯ ಪ್ರಭಾವವನ್ನು ಕಡಿಮೆ ಮಾಡಲು ಪಿಚ್ ಕ್ಯುರೇಟರ್‌ಗಳಿಗೆ ‘ಪ್ರೊಟೊಕಾಲ್’ ಬಿಡುಗಡೆ ಮಾಡಿದೆ. ಅದರಂತೆ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯುವ ಕ್ರೀಡಾಂಗಣಗಳ ಪಿಚ್ ನಲ್ಲಿ ಹೆಚ್ಚು ಹುಲ್ಲು ಇಡುವಂತೆ ಸಲಹೆ ನೀಡಲಾಗಿದೆ. 

ಇದರಿಂದ ಸ್ಪಿನ್ನರ್‌ಗಳಂತೆ ವೇಗದ ಬೌಲರ್‌ಗಳಿಗೂ ನೆರವು ಸಿಗುತ್ತದೆ. ಅಷ್ಟು ಮಾತ್ರವಲ್ಲದೇ ಪ್ರತಿ ಕ್ರೀಡಾಂಗಣ ಬೌಂಡರಿ ಗಡಿಯನ್ನು ವಿಸ್ತರಿಸಲಾಗಿದ್ದು, ಟೂರ್ನಿಯಲ್ಲಿ ಬೌಂಡರಿ ಗೆರೆ 70ಮೀಟರ್ ಗೆ ಏರಿಸಲಾಗಿದೆ. ಹೀಗಾಗಿ ಹಾಲಿ ಟೂರ್ನಿಯಲ್ಲಿ ಟಾಸ್ ಗಳು ಪ್ರಮುಖವಾಗಿರುವುದಿಲ್ಲ. ಬದಲಿಗೆ ಆ ಕ್ಷಣ ಉತ್ತಮವಾಗಿ ಆಡುವವರು ಮೇಲುಗೈ ಸಾಧಿಸಲಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2021 ರಲ್ಲಿ ಯುಎಇಯಲ್ಲಿ ನಡೆದಿದ್ದ ಟಿ 20 ವಿಶ್ವಕಪ್ ಮೇಲೆ ಕೂಡ ಇಬ್ಬನಿ ಹೆಚ್ಚು ಪರಿಣಾಮ ಬೀರಿತ್ತು. ಹೀಗಾಗಿ ಚೇಸ್ ಮಾಡುವ ತಂಡಕ್ಕೆ ಇದರಿಂದ ಹೆತ್ತು ಪ್ರಯೋಜನವಾಗಿತ್ತು. ಇದೇ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಐಸಿಸಿ ಈ ಮಹತ್ವದ ನಿರ್ಣಯಕ್ಕೆ ಬಂದಿದೆ ಎನ್ನಲಾಗಿದೆ. ಭಾರತೀಯ ಪರಿಸ್ಥಿತಿಗಳು ಸಾಮಾನ್ಯವಾಗಿ ಸ್ಪಿನ್‌ಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಆದರೆ ಸೀಮರ್‌ಗಳು ಆಟದಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಪಿಚ್‌ಗಳಲ್ಲಿ ಸಾಧ್ಯವಾದಷ್ಟು ಹುಲ್ಲು ಬಿಡುವಂತೆ ಐಸಿಸಿ ಪಿಚ್ ಕ್ಯುರೇಟರ್‌ಗಳನ್ನು ಕೇಳಿದೆ. ಇದರರ್ಥ ಆಡುವ ಹನ್ನೊಂದು ಮಂದಿಯ ಆಟಗಾರರ ಬಳಗದಲ್ಲಿ ಹೆಚ್ಚಿನ ವೇಗಿಗಳನ್ನು ಹೊಂದಲು ತಂಡಗಳು ಉತ್ಸುಕರಾಗಿರುತ್ತವೆ.

“ಭಾರತದ ಉತ್ತರ, ಪಶ್ಚಿಮ ಮತ್ತು ಪೂರ್ವ ರಾಜ್ಯಗಳ ಸ್ಥಳಗಳು ವರ್ಷದ ಈ ಸಮಯದಲ್ಲಿ ಅಂದರೆ ಟೂರ್ನಿಯ ಪಂದ್ಯಗಳು ನಡೆಯುವ ಸಮಯದಲ್ಲಿ ಭಾರೀ ಇಬ್ಬನಿಯನ್ನು ಕಾಣುವ ಸಾಧ್ಯತೆಯಿದೆ. ಚೆನ್ನೈ ಮತ್ತು ಬಹುಶಃ ಬೆಂಗಳೂರಿನಲ್ಲಿ ಪಂದ್ಯಗಳು ಯೋಗ್ಯ ಪ್ರಮಾಣದ ಮಳೆಯನ್ನು ಕಾಣುವ ಸಾಧ್ಯತೆಯಿದೆ. ಹೀಗಾಗಿ ಟಾಸ್ ಅನ್ನು ಪ್ರಾಮುಖ್ಯತೆಯಿಂದ ಹೊರಗಿಡುವುದು ಇದರ ಮುಖ್ಯ ಆಲೋಚನೆಯಾಗಿದೆ. ಇಬ್ಬನಿಯು ಸ್ಪಿನ್ನರ್‌ಗಳ ಪ್ರದರ್ಶನದ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಪಿಚ್ ಮೇಲೆ ಹೆಚ್ಚು ಹುಲ್ಲಿದ್ದರೆ ತಂಡಗಳು ಸ್ಪಿನ್ನರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗುವುದಿಲ್ಲ. ಅದು ನಿಜವಾದ ಮೇಲ್ಮೈಗಳನ್ನು ಹೊಂದಲು ಸಹಾಯ ಮಾಡುತ್ತದೆ. ಏಕದಿನ ಪಂದ್ಯಗಳು ಆಸಕ್ತಿದಾಯಕವಾಗಿರಲು ಹೆಚ್ಚಿನ ಸ್ಕೋರ್ ಗಳ ಅಗತ್ಯವಿಲ್ಲ. ಉಭಯ ತಂಡಗಳ ಉತ್ತಮ ಪ್ರದರ್ಶನವಿರಬೇಕು ಎಂದು ಐಸಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂದಹಾಗೆ ಇದೇ ಅಕ್ಟೋಬರ್ 5 ರಿಂದ ವಿಶ್ವಕಪ್ ಪ್ರಾರಂಭವಾಗಲಿದ್ದು, ಮೊದಲ ಪಂದ್ಯ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ನಡುವೆ ನಡೆಯಲಿದೆ.

Latest Indian news

Popular Stories