ರಾಯಚೂರು: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಜೇಷನ್(ಎಐಡಿವೈಒ) ನ 59ನೇ ಸಂಸ್ಥಾಪನಾ ದಿನದ ಅಂಗವಾಗಿ ರಾಯಚೂರು ತಾಲ್ಲೂಕಿನ ಮನ್ಸಲಾಪುರ ಗ್ರಾಮ ಘಟಕದಿಂದ ಭಾನುವಾರ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ಕೈ ಕಲ್ಲು ಗುಂಡು ಎತ್ತುವ ಸ್ಪರ್ಧೆ, ನಿಧಾನ ಸೈಕಲ್ ಓಟ ಮತ್ತು ಗುಂಡು ಎಸೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗ್ರಾಮದ ಯುವಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶಿಸಿ ಗಮನ ಸೆಳೆದರು.
ನಂತರ ಎಐಡಿವೈಒ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಗತ್ ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಜೇತರಿಗೆ ಬಹುಮಾನ ವಿತರಿಸಿದರು.
ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಇಂದಿನ ದಿನಗಳಲ್ಲಿ ನಮ್ಮ ನಡುವಿನ ಸಾಮಾಜಿಕ-ಸಾಂಸ್ಕೃತಿಕ ವಾತಾವರಣವು ಕಲುಷಿತವಾಗಿದೆ. ಯುವಕರು ತಮ್ಮ ಅರ್ಹತೆಗೆ ತಕ್ಕಂತೆ ಉದ್ಯೋಗವಿಲ್ಲದೆ, ನಿರ್ಧಿಷ್ಟ ಗುರಿಯಿಲ್ಲದೆ ದಿನಗಳು ದೂಡುತ್ತಿದ್ದಾರೆ. ಅನೇಕರು ಮಾದಕ ವಸ್ತುಗಳಿಗೆ ಮಾರುಹೋಗಿದ್ದಾರೆ. ಅಶ್ಲೀಲ ಸಿನಿಮಾ-ಸಾಹಿತ್ಯ, ಕ್ರಿಕೆಟ್ ಬೆಟ್ಟಿಂಗ್, ಮೊಬೈಲ್ ಗೀಳಿನಲ್ಲಿ ಮುಳುಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳ ಕಂತೆಯಲ್ಲಿ ಯುವಕರು ಕಳೆದು ಹೋಗುವಂತಾಗಿದೆ ಎಂದು ದೂರಿದರು.
ಯುವಕರ ನೈತಿಕ ಬೆನ್ನೆಲುಬು ಮುರಿಯುವ ಕೆಲಸ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರಲ್ಲಿ ಸ್ನೇಹ, ಸೌಹಾರ್ದತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕ್ರೀಡೆಗಳು ಸಹಾರಿಯಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಮೂಲೆಗುಂಪಾಗುತ್ತಿದೆ. ಯುವಕರಲ್ಲಿ ಕ್ರೀಡಾ ಸ್ಫೂರ್ತಿ ಹಾಗೂ ಉತ್ಸಾಹ ತುಂಬಲು ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ ಎಂದರು.
ಕೈ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ರಾಮು ಪ್ರಥಮ ಹಾಗೂ ಹನುಮೇಶ ದ್ವಿತೀಯ ಬಹುಮಾನ ಪಡೆದರು. ನಿಧಾನ ಸೈಕಲ್ ಓಟದ ಸ್ಪರ್ಧೆಯಲ್ಲಿ ಮೈಲಾರಿ ಪ್ರಥಮ, ವಿಜಯ ಕುಮಾರ ದ್ವಿತೀಯ ಬಹುಮಾನ ಮಾಡಲಾಯಿತು. ಗುಂಡು ಎತ್ತುವ ಸ್ಪರ್ಧೆಯಲ್ಲಿ ಹನುಮೇಶ ಪ್ರಥಮ, ಅವಿನಾಶ ದ್ವಿತೀಯ, ಗುಂಡು ಎಸೆತ ಸ್ಪರ್ಧೆಯಲ್ಲಿ ತಿಮ್ಮಾರೆಡ್ಡಿ ಪ್ರಥಮ, ಅವಿನಾಶ್ ಹೆಳವರ ದ್ವಿತೀಯ ಬಹುಮಾನ ಪಡೆದರು.
ಈ ಸಂದರ್ಭದಲ್ಲಿ ಮುಖಂಡರಾದ ಪಾಲಾಕ್ಷಿ ಗೌಡ, ಸಿದ್ದಯ್ಯ ಸ್ವಾಮಿ, ನೇತಾಜಿ ಶಾಲೆಯ ಮುಖ್ಯ ಶಿಕ್ಷಕ ಹನುಮಂತ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕಾರ್ಮಿಕ ಮುಖಂಡ ಅಣ್ಣಪ್ಪ, ರೈತ ಮುಖಂಡ ರಾಮಣ್ಣ , ಎಐಡಿವೈಒ ಜಿಲ್ಲಾ ಘಟಕದ ಕಾರ್ಯದರ್ಶಿ ವಿನೋದ ಕುಮಾರ, ಗ್ರಾಮ ಘಟಕದ ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ಸಂತೋಷ ಸಾಗರ್, ಜಲಾಲ್ ರೆಡ್ಡಿ, ಲಕ್ಷ್ಮಣ, ಸತೀಶ ಕುಮಾರ, ಶಿವಪುತ್ರ, ಶಿವರಾಜ, ಹನುಮಂತ ಮಿಠಾಯಿ , ಆಂಜನೇಯ ಇದ್ದರು