ಅನ್ನದಾತನ ಪ್ರತಿಭಟನೆಗೆ ಸಂದ ಜಯ – ಟಿ.ಎ ನಾರಾಯಣ ಗೌಡ

ಒಕ್ಕೂಟ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿದೆ. ಇದು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ದೇಶದ ಅನ್ನದಾತ ನಡೆಸುತ್ತಿದ್ದ ಪ್ರತಿಭಟನೆಗಳಿಗೆ ಸಂದ ಜಯ. ರೈತರ ಅಸ್ತಿತ್ವವನ್ನೇ ನಾಶಪಡಿಸುವಂಥ ಕಾಯ್ದೆಗಳನ್ನು ಹಿಂದಕ್ಕೆ ಪಡೆಯದೆ ಒಕ್ಕೂಟ ಸರ್ಕಾರಕ್ಕೆ ಬೇರೆ ಆಯ್ಕೆಗಳಿರಲಿಲ್ಲ. ಕೊನೆಗೂ ರೈತರಿಗೆ ನ್ಯಾಯ ದೊರಕಿದೆ.

ರೈತರಿಗೇ ಇಷ್ಟವಿಲ್ಲದಿದ್ದರೂ ರೈತರ ಅನುಕೂಲಕ್ಕಾಗಿ ಈ ಕಾಯ್ದೆಗಳನ್ನು ತಂದಿರುವುದಾಗಿ ಒಕ್ಕೂಟ ಸರ್ಕಾರ ಹೇಳುತ್ತಿತ್ತು. ಮೂರೂ ಕಾಯ್ದೆಗಳನ್ನು ಗಮನಿಸಿದರೆ, ಅದು ರೈತರ ಒಳಿತಿಗಾಗಿಯಲ್ಲ, ಈ ದೇಶದ ಕಾರ್ಪೊರೇಟ್ ಶಕ್ತಿಗಳ ಉದ್ಧಾರಕ್ಕೆ ತಂದ ಕಾಯ್ದೆಗಳು ಎಂಬುದು ಸುಲಭವಾಗಿ ಅರ್ಥ ಆಗುತ್ತಿತ್ತು. ಕೊನೆಗೂ ಕಾರ್ಪೊರೇಟ್ ಲಾಬಿ ಮಣಿದಿದೆ, ರೈತರ ಶಕ್ತಿ ಗೆದ್ದಿದೆ.

ಮುಂಬರುವ ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಒಕ್ಕೂಟ ಸರ್ಕಾರ ಕರಾಳ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿದೆ ಎಂಬ ಅಭಿಪ್ರಾಯವಿದೆ. ಏನೇ ಆಗಿರಲಿ, ಒಕ್ಕೂಟ ಸರ್ಕಾರ ಬಹಳ ತಡವಾಗಿಯಾದರೂ ಜನರ ಪ್ರತಿರೋಧಕ್ಕೆ ಮಣಿದಿದೆ, ಇದು ಸ್ವಾಗತಾರ್ಹ.

ಕೃಷಿ‌ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿರುವ ಒಕ್ಕೂಟ ಸರ್ಕಾರ ಅನ್ನದಾತ ರೈತರ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ‌ ಪಡೆಯುವಂತೆ ವಿವಿಧ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕು. ರೈತ ಹೋರಾಟಗಾರರನ್ನು ಭಯೋತ್ಪಾದಕರೆಂಬಂತೆ ಚಿತ್ರಿಸಿದವರು ಕ್ಷಮೆ ಕೋರಬೇಕು. ಹೋರಾಟದ ಸಂದರ್ಭದಲ್ಲಿ ಬಲಿಯಾದ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು.

ಕರ್ನಾಟಕದಲ್ಲೂ ರೈತರ ಹೋರಾಟ ಬೆಂಬಲಿಸಿ ನಡೆಸಿದ ಪ್ರತಿಭಟನಾಕಾರರ ಮೇಲೆ ಸುಳ್ಳು ಮೊಕದ್ದಮೆ ಹೂಡಲಾಗಿದೆ. ರೈತರ ಹೋರಾಟ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನಲ್ಲಿ‌ ನಡೆಸಿದ ಪ್ರತಿಭಟಿಸಿತ್ತು. ಶಾಂತಿಯುತವಾಗಿ, ಪೊಲೀಸ್ ಪೂರ್ವಾನುಮತಿಯೊಂದಿಗೆ ನಡೆದ ಈ‌ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.

ಕರವೇ ಕಾರ್ಯಕರ್ತರಲ್ಲದೆ ವಿವಿಧ ರೈತ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರ ಮೇಲೂ ಹಲವಾರು ಪೊಲೀಸ್ ಠಾಣೆಗಳಲ್ಲಿ ಸುಳ್ಳು ಮೊಕದ್ದಮೆಗಳನ್ನು ಹೂಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ‌ ಅವರುಗಳು ಕೂಡಲೇ ಈ ಎಲ್ಲ ಮೊಕದ್ದಮೆ ಹಿಂದಕ್ಕೆ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು.

ಒಕ್ಕೂಟ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ರೈತರ ಬದುಕಿಗೆ ಸಂಚಕಾರ ತರುವ ಕಾಯ್ದೆಗಳನ್ನು ಹೇರುವ ಕೆಲಸ ಮಾಡಬಾರದು. ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದೇಶದ ರೈತರು ನಡೆಸಿದ ಹೋರಾಟ ಚಾರಿತ್ರಿಕವಾದದ್ದು. ಇದು ಎಲ್ಲ ಸರ್ಕಾರಗಳಿಗೂ ಪಾಠ, ಇದನ್ನು ಎಲ್ಲರೂ ಅರಿತುಕೊಳ್ಳುವುದು ಒಳ್ಳೆಯದು ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

Latest Indian news

Popular Stories

error: Content is protected !!