ಈಗಲಾದರೂ ಜನ್‌ ಕಿ ಬಾತ್‌ ಕೇಳುತ್ತೀರಾ: ಪ್ರಧಾನಿಗೆ ಸಿದ್ದು ಪ್ರಶ್ನೆ

ನರೇಂದ್ರ ಮೋದಿ ಅವರೇ, ನೀವು ನೂರು ಮನ್‌ ಕಿ ಬಾತ್‌ ಕಾರ್ಯಕ್ರಮವನ್ನು ಮುಗಿಸಿದ್ದಕ್ಕೆ ಅಭಿನಂದನೆಗಳು. ಈಗಲಾದರೂ ಜನ್‌ ಕಿ ಬಾತ್‌ ಕೇಳುತ್ತೀರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ ಗೆ 125 ಡಾಲರ್‌ ಇದ್ದಾಗ ದೇಶದಲ್ಲಿ ಪೆಟ್ರೋಲ್‌ ಬೆಲೆ 57 ರೂ. ಇತ್ತು, ಈಗ ಕಚ್ಚಾ ತೈಲದ ಬೆಲೆ ಬ್ಯಾರಲ್‌ ಗೆ 54.77 ಡಾಲರ್‌ ಇರುವಾಗ ಪೆಟ್ರೋಲ್‌ ಬೆಲೆ ರೂ. 102 ರೂ. ಆಗಿರುವುದು ಯಾಕೆ ಎಂದಿದ್ದಾರೆ.

ನಾ ಖಾವುಂಗಾ, ನಾ ಖಾನೆದೂಂಗಾ ಎಂದು ನೀವು ಹೇಳಿದರೂ ನಿಮ್ಮ ಪಕ್ಷದ ಸಚಿವರೇ ಕಮಿಷನ್‌ ಹಣ ತಿಂದು ಜೈಲಿಗೆ ಹೋಗುತ್ತಿರುವುದೇಕೆ ಎಂದು ಕೇಳಿದ್ದಾರೆ.

ರಾಜ್ಯದ ಸಚಿವರು ಸರ್ಕಾರಿ ಗುತ್ತಿಗೆಗಳಲ್ಲಿ 40 ಪರ್ಸೆಂಟ್‌ ಕಮಿಷನ್‌ ಕೇಳುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ನಿಮಗೆ ಪತ್ರ ಬರೆದಿದ್ದರೂ ಅದಕ್ಕೆ ಉತ್ತರಿಸುವ ಧೈರ್ಯ ತೋರಿಲ್ಲ ಯಾಕೆ ಎಂದಿದ್ದಾರೆ.

ಪಿಎಸ್‌ಐ ನೇಮಕದಲ್ಲಿ ಅಂದಾಜು 300 ಕೋಟಿ ರೂ.ಗೂ ಮೀರಿ ಲಂಚದ ಅವ್ಯವಹಾರ ನಡೆದು ಉದ್ಯೋಗದ ಅವಕಾಶ ಕಳೆದುಕೊಂಡಿರುವ ಸುಮಾರು 54 ಸಾವಿರ ಯುವಜನರ ಮನದ ಮಾತಿಗೆ ನೀವು ಪ್ರತಿಕ್ರಿಯಿಸದೆ ಮೌನವಾಗಿರುವುದು ಯಾಕೆ ಎಂದು ಕೇಳಿದ್ದಾರೆ.

ಪ್ರಧಾನಿ ಅವರೇ ನೀವು ರೋಡ್‌ ಶೋ ನಡೆಸಿರುವ ಬೆಂಗಳೂರು ರಸ್ತೆಗಳಲ್ಲಿರುವ 25,000 ಗುಂಡಿಗಳನ್ನು ಮುಚ್ಚಲು 7,200 ಕೋಟಿ, ಅಂದರೆ ಒಂದು ಗುಂಡಿಗೆ ತಲಾ 9.20 ರೂ. ಲಕ್ಷ ಖರ್ಚು ಮಾಡಿದರೂ ಗುಂಡಿಗಳು ಹಾಗೆಯೇ ಉಳಿದುಕೊಂಡಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದ ಐದು ವರ್ಷಗಳ ಆಡಳಿತದಲ್ಲಿ ಮಾಡಿದ್ದ ಒಟ್ಟು ಸಾಲ 1.16 ಲಕ್ಷ ಕೋಟಿ, ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಒಟ್ಟು ಸಾಲ 3.22 ಲಕ್ಷ ಕೋಟಿ ರೂ. ಡಬಲ್‌ ಎಂಜಿನ್‌ ಸರ್ಕಾರ ಕರ್ನಾಟಕ ರಾಜ್ಯವನ್ನು ಸಾಲಗಾರ ರಾಜ್ಯ ಮಾಡಿದ್ದು ಯಾಕೆ ಎಂದು ಕೇಳಿದ್ದಾರೆ.

Latest Indian news

Popular Stories