ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸನ್ನು ತೊಳೆದು ಅರಬ್ಬಿ ಸಮುದ್ರಕ್ಕೆ ಎಸೆಯಿರಿ. ಕರ್ನಾಟಕ ಬಿಜೆಪಿಗೆ ಮೋದಿಗೆ ಕೊಡುವ ಮೆಜಾರಿಟಿ ಕೊಡಿ, ಸ್ಪಷ್ಟ ಬಹುಮತ ನೀಡಿದರೆ ಸಣ್ಣ-ಪುಟ್ಟ ದೋಷಗಳು ದೂರವಾಗುತ್ತದೆ. ಒಂದೇ ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಿಸಬೇಡಿ, ಆಗ ರಾಜಕಾರಣ ಸ್ವಚ್ಛವಾಗುತ್ತೆ, ರಾಷ್ಟ್ರಭಕ್ತಿ ರಾಜಕಾರಣ ಬರುತ್ತದೆ. ಅಧಿಕಾರಕ್ಕಾಗಿ ಎಲ್ಲಿ ಬೇಕಾದರೂ ಹೋಗುವ ಸಿದ್ಧಾಂತವಿಲ್ಲದ ಜೆಡಿಎಸ್‍ಗೆ ಮತ ಹಾಕಬೇಡಿ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008-2018ರಲ್ಲೂ ಬಹುಮತ ಇರಲಿಲ್ಲ, ಸೇರಿಸಿಕೊಂಡು ಸರ್ಕಾರ ಮಾಡಬೇಕಾಯ್ತು. ಅಂತಹ ಪರಿಸ್ಥಿತಿ ಬರಬಾರದೆಂದರೆ ಜನ ಸ್ಪಷ್ಟ ಬಹುಮತ ಕೊಡಬೇಕು. ಜೆಡಿಎಸ್ ಬಿಜೆಪಿ ಟೀಂ ಅಂದ ಕಾಂಗ್ರೆಸ್ 2018ರಲ್ಲಿ ಮಾಡಿದ್ದೇನು? ಸರ್ಕಾರ ಹಾಗೂ ಪಾರ್ಲಿಮೆಂಟ್ ಚುನಾವಣೆಯನ್ನು ಅವರ ಜೊತೆಯೇ ಸೇರಿ ಮಾಡಿದ್ದರು ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ನನ್ನ ಅವಧಿಯಲ್ಲಿ ಅವ್ಯವಹಾರ ನಡೆದಿದ್ದರೆ ರಾಜಕೀಯ ನಿವೃತ್ತಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ. ರವಿ, ನಿಮಗೆ ನೀವೇ ಸತ್ಯಹರಿಶ್ಚಂದ್ರ ಅಂತ ಸರ್ಟಿಫಿಕೇಟ್ ಕೊಟ್ಟುಕೊಳ್ಳಲಾಗದು. ಹಾಗಾದರೆ ರಿಡ್ಯೂ ಅಂದರೆನೆಂದು ಸ್ವಲ್ಪ ಬಿಡಿಸಿ ಹೇಳಿ. ಹಾಸಿಗೆ-ದಿಂಬು ವಿಷಯದಲ್ಲಿ ಹಣ ತಿಂದು ಕೇಸ್ ದಾಖಲಾಗಿದ್ದು ಮರೆತು ಹೋಯಿತೇ? ಸ್ಯಾಂಡ್ ಸ್ಕ್ಯಾಮ್ ನಲ್ಲಿ ಯಾರು ಭಾಗಿಯಾಗಿದ್ದೆಂದು ಬಿಡಿಸಿ ಹೇಳಬೇಕೆ ಎಂದರು.