ಬೆಂಗಳೂರು: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 221 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಗುರುವಾರ ಬಿಡುಗಡೆ ಮಾಡಲಾಗಿದ್ದು, 221 ಕ್ಷೇತ್ರಗಳಲ್ಲಿ 5.05 ಕೋಟಿ ಮತದಾರರು ಇರುವುದು ಪಟ್ಟಿಯಿಂದ ತಿಳಿದುಬಂದಿದೆ.
ಇನ್ನುಳಿದ ಮೂರು ವಿಧಾನಸಭಾ ಕ್ಷೇತ್ರಗಳಾದ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರದಲ್ಲಿ ಮತದಾರರ ಮಾಹಿತಿ ಕಳ್ಳತನ ಆರೋಪದ ಕುರಿತು ವಿಚಾರಣೆ ನಡೆಯುತ್ತಿರುವ ಕಾರಣ ಜನವರಿ 15 ರಂದು ಪಟ್ಟಿಯ ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ.
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಗುರುವಾರ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವಿವರಗಳ ಪ್ರಕಾರ, ಕರ್ನಾಟಕದಲ್ಲಿ ಮತದಾರರ ಸಂಖ್ಯೆ 5,05,48,553 ಇದ್ದು, ಹೊಸದಾಗಿ 12,31,540 ಮತದಾರರು ಸೇರ್ಪಡೆಗೊಂಡಿರುವುದು ತಿಳಿದುಬಂದಿದೆ. 6,18,965 ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಿರುವುದು ಕಂಡು ಬಂದಿದ್ದು, ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 221 ಕ್ಷೇತ್ರಗಳಲ್ಲಿ ಒಟ್ಟು ಮತದಾರರ ಸಂಖ್ಯೆ 4,99,34,730 ಕಂಡು ಬಂದಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 6,50,53 ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಅತಿ ಕಡಿಮೆ ಅಂದರೆ 1,66,521 ಮತದಾರರಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಬಾರಿ ಯುವ ಮತದಾರರ ಸಂಖ್ಯೆ 7,01,243 ಆಗಿದೆ.
2011 ರ ಜನಗಣತಿಯ ಪ್ರಕಾರ, ಕರ್ನಾಟಕದ ಲಿಂಗ ಅನುಪಾತವು 973ರಷ್ಟಿದೆ ಎಂದು ತಿಳಿಸಿತ್ತು. ಆದರೆ, ಅಂತಿಮ ಮತದಾರರ ಪಟ್ಟಿ-2023 ರ ಪ್ರಕಾರ, ಲಿಂಗ ಅನುಪಾತವು 988 ಆಗಿದೆ ಎಂದು ತಿಳಿಸಿದೆ.
ಈ ವಿವರಗಳು ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಎಲ್ಲಾ ಮತಗಟ್ಟೆಗಳಿಂದ ಬಂದಿರುವುದಾಗಿದೆ.
ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ (https://ceo.karnataka.gov.in) ಅವರ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗುತ್ತದೆ.
ಸರಿಯಾದ ಮಾಹಿತಿಯೊಂದಿಗೆ ತಮ್ಮ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂಬುದನ್ನು ಜನರು ಪರಿಶೀಲಿಸಬಹುದಾಗಿದೆ. “ನಿರಂತರ ಅಪ್‌ಡೇಟ್ ಅವಧಿಯಲ್ಲಿ” ಅರ್ಜಿಗಳನ್ನು ಪೋರ್ಟಲ್‌ಗಳಾದ NVSP, ವೋಟರ್ ಪೋರ್ಟಲ್ ಅಥವಾ ವೋಟರ್ ಹೆಲ್ಪ್‌ಲೈನ್ ಮೊಬೈಲ್ ಅಪ್ಲಿಕೇಶನ್ ಬಳಸಿ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.
ಯುವ ಮತದಾರರು
17 ವರ್ಷ ಪೂರೈಸಿದ ಯುವಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ದತ್ತಾಂಶ ಕಳ್ಳತನದ ಆರೋಪದ ಸಂಬಂಧ ತನಿಖೆ ಮುಂದುವರಿದಿದ್ದು, ಜನವರಿ 15 ರಂದು ವರದಿಯನ್ನು ಸಲ್ಲಿಸಲಾಗುವುದು. ಅದರ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಹೇಳಿದ್ದಾರೆ.