ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವಂತೆ ಕೇಂದ್ರ ಚುನಾವಣ ಆಯೋಗದ ದೃಷ್ಟಿ ಕರ್ನಾಟಕದತ್ತ ನೆಟ್ಟಿದೆ. ಅದರ ಭಾಗವಾಗಿ ಚುನಾವಣೆಯ ಪೂರ್ವ ಸಿದ್ಧತೆಗಳನ್ನು ಆಯೋಗ ಪರಿಶೀಲಿಸಿದೆ.
ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಕೈಗೊಂಡಿರುವ ಪೂರ್ವ ತಯಾರಿ ಕಾರ್ಯಕ್ರಮ ಗಳನ್ನು ಕೇಂದ್ರ ಚುನಾವಣ ಆಯೋಗದ ಆಯುಕ್ತ ಅಜಯ್ ಭಾದೂ ಹಾಗೂ ಕಾರ್ಯದರ್ಶಿ ಬಿ.ಸಿ. ಪಾತ್ರ ಸೋಮವಾರ ಮತ್ತು ಮಂಗಳವಾರ ಪರಿಶೀಲಿಸಿದರು.
ಚುನಾವಣಾಧಿಕಾರಿಗಳ ಜತೆ ಚರ್ಚೆ
ಚುನಾವಣ ಪೂರ್ವ ಸಿದ್ಧತೆಗಳನ್ನು ಪರಿವೀಕ್ಷಿಸಲು 2 ದಿನಗಳ ಭೇಟಿಗೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಚುನಾವಣ ಆಯೋಗದ ಈ ಇಬ್ಬರು ಹಿರಿಯ ಅಧಿಕಾರಿಗಳು ಮೊದಲ ದಿನ ಜ. 2ರಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಎರಡನೇ ದಿನ ಜ. 3ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳ ಜತೆ ವರ್ಚುವಲ್ ಸಭೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು.
ಅಂತಿಮ ಪಟ್ಟಿ: ನಿಗಾ ವಹಿಸಿ
ಅಂತಿಮ ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರ ಮಾಹಿತಿ ಸರಿಯಾಗಿರಬೇಕು. ಹೆಸರುಗಳನ್ನುಕೈ ಬಿಡದಂತೆ ಜಾಗೃತ ವಹಿಸಬೇಕು. ಜಿಲ್ಲಾ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಪ್ರತೀ ಮನೆ-ಮನೆಗೆ ಭೇಟಿ ನೀಡಿ ಸರಿಯಾದ ಮಾಹಿತಿಯನ್ನು ತಳಹಂತದ ಅಧಿಕಾರಿಗಳು ಸಂಗ್ರಹಿಸಿರುವ ಬಗ್ಗೆ ನಿಗಾ ವಹಿಸಬೇಕು. ಅಂತಿಮ ಮತದಾರರ ಪಟ್ಟಿಯ ತಯಾರಿಯಲ್ಲಿ ತಮ್ಮ ಜಿಲ್ಲಾ ವ್ಯಾಪ್ತಿಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಸೇರ್ಪಡೆಗೊಂಡಿರುವ ಮತ್ತು ತೆಗೆದು ಹಾಕಿರುವ 10 ಮತಕೇಂದ್ರಗಳನ್ನು ಗುರುತಿಸಿ ಅವುಗಳಿಗೆ ಸಕಾರಣಗಳನ್ನು ಕಂಡುಕೊಂಡು ಸರಿಮಾಡುವಂತೆ ಸೂಚಿಸಿದರು.
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಅಪರ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್ ಕುಮಾರ್, ಪಿ. ರಾಜೇಂದ್ರ ಚೋಳನ್ ಇದ್ದರು.
ಮಾರ್ಗಸೂಚಿ ಪಾಲಿಸಿ
ಸಭೆಯಲ್ಲಿ ಮುಖ್ಯವಾಗಿ ಇದೇ ತಿಂಗಳು ಪ್ರಕಟವಾಗಲಿರುವ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಗೆ ಸಂಬಂಧಿಸಿ ಚರ್ಚಿಲಾಯಿತು. ಅದರಲ್ಲೂ ಮುಖ್ಯವಾಗಿ ಅಂತಿಮ ಮತದಾರರ ಪಟ್ಟಿ ತಯಾರಿಕೆಯಲ್ಲಿ ಮೃತಪಟ್ಟವರ ಹೆಸರನ್ನು ತೆಗೆದು ಹಾಕು ವುದು, ವಿಳಾಸ ಬದಲಾದವರ ಹೆಸರುಗಳ ವರ್ಗಾವಣೆ ಮತ್ತು ಹೊಸ ಯುವ ಮತದಾರರ ಹೆಸರುಗಳ ಸೇರ್ಪಡೆ ಕುರಿತಂತೆ ಅನುಸರಿಸಬೇಕಾದ ವಿಧಾನಗಳ ಕುರಿತು ಹೆಚ್ಚು ಒತ್ತು ನೀಡುವಂತೆ ಹಾಗೂ ಚುನಾವಣ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸು
ವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.