ಕೋಮುವಾದ – ಭ್ರಷ್ಟಾಚಾರ ಪೋಷಕ ಸರಕಾರ : ತಾಹೀರ್ ಹುಸೇನ್ ಆಕ್ರೋಶ

ಬೆಂಗಳೂರು :ಕೋಮುದ್ವೇಷ ಭಾಷಣದ 34 ಪ್ರಕರಣಗಳನ್ನು ಹಿಂದೆ ಪಡೆಯುವ ರಾಜ್ಯ ಬಿಜೆಪಿ ಸರ್ಕಾರದ ಅಘಾತಕಾರಿ ನಿರ್ಣಯ ಅತ್ಯಂತ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆ, ಕಾನೂನು ಇಲಾಖೆ ವಿರೋಧ ವ್ಯಕ್ತಪಡಿಸಿದರು ಪರಿಗಣಿಸದೆ ಇಂಥ ನಿರ್ಣಯ ತೆಗೆದುಕೊಂಡು ಕೋಮುವಾದಕ್ಕೆ ನೇರವಾಗಿ ಸರ್ಕಾರ ಕುಮ್ಮಕು ನೀಡುತ್ತಿದೆ ಎಂದು ಅವರು ಹೇಳಿದರು.

ಕೋಮುವಾದ, ಭ್ರಷ್ಟಾಚಾರ ಪ್ರಕರಣಗಳು ಹಿಂದೆಂದೂ ಕಂಡರಿಯದ, ಕೇಳರಿಯದ ರೀತಿಯಲ್ಲಿ ಕಾಣುತ್ತಿರುವುದು ದುರಂತ. ನಾಡಿನ ಜನತೆ ಹಿತ ಕಾಯುವ ಬದಲು ಕೋಮುವಾದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಸರಕಾರ ಇದಾಗಿದೆ.

ನಮ್ಮ ರಾಜ್ಯದ ಮುಖ್ಯಮಂತ್ರಿ ಇನ್ನೊಂದು ರಾಜ್ಯಕ್ಕೆ ಹೋದಾಗ ಅವರನ್ನು 40 ಪರ್ಸೆಂಟ್ ಸಿಎಂ ಎಂದು ಸ್ವಾಗತಿಸುವ ಬ್ಯಾನರ್ ಹಾಕುತ್ತಾರೆಂದರೆ ಎಷ್ಟರ ಮಟ್ಟಿಗೆ ಕರ್ನಾಟಕ ರಾಜಕಾರಣ ಅಧಃ ಪತನಕ್ಕೆ ಇಳಿದಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಕರುನಾಡು ಜಾತ್ಯಾತೀತ ತವರು, ಶಾಂತಿಯ ತೋಟ ಎಂದು ಹೆಸರುವಾಸಿಯಾಗಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜಾತ್ಯಾತೀತ ಪರಂಪರೆ ಸಂಸ್ಕೃತಿ ನೆಲಕಚ್ಚಿದೆ. ಜನರ ಬದುಕು ರೂಪಿಸುವ ಬದಲು ಸರಕಾರವೇ ಖುದ್ದಾಗಿ ಮುಂದೆ ನಿಂತು ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿದೆ ಎನ್ನುವುದು ನಮ್ಮ ದುರಂತ.

ಕೋಮುವಾದಿ ಸಂಸ್ಕೃತಿಯನ್ನು ಬದಿಗಿಟ್ಟು ಜನ ಸಾಮಾನ್ಯರ ಒಳಿತಿಗಾಗಿ ಸರಕಾರ ಯೋಜನೆಗಳನ್ನು ರೂಪಿಸುವ ಮೂಲಕ ರೈತಾಪಿ ವರ್ಗ, ಕೂಲಿ ಕಾರ್ಮಿಕರು, ಕೆಳ ಮಧ್ಯಮ ವರ್ಗದ ಜನರ ಸಹಾಯಕ್ಕೆ ಮುಂದಾಗಬೇಕು ಎಂದು ಹುಸೇನ್ ಆಗ್ರಹಿಸಿದರು.

Latest Indian news

Popular Stories

Social Media Auto Publish Powered By : XYZScripts.com
error: Content is protected !!