ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಬಿಜೆಪಿ ‘ಸಿದ್ದು ನಿಜಕನಸುಗಳು’ ಎಂಬ ಪುಸ್ತಕ ಬರೆದಿದ್ದು, ಇದು ಸಂಪೂರ್ಣ ಮಾನಹಾನಿಕರವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಈ ಪುಸ್ತಕದ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ ನಡೆಸುತ್ತಿದ್ದೇನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ತಿಳಿಸಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನಗರದ 60ನೇ ಸಿಸಿಹೆಚ್ ನ್ಯಾಯಾಲಯ ಪುಸ್ತಕ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಮೂಲಗಳ ಪ್ರಕಾರ, ಪುಸ್ತಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ದುರಾಡಳಿತ ಮತ್ತು ಅವರ ಮುಸ್ಲಿಂ ತುಷ್ಟೀಕರಣ ರಾಜಕೀಯದ ಬರಹಗಳಿವೆ. ಇದು ಮಾಜಿ ಮುಖ್ಯಮಂತ್ರಿಯವರ ಅಧಿಕಾರಾವಧಿಗೆ ಸಂಬಂಧಿಸಿದ ಕೆಲವು ವಿವಾದಾತ್ಮಕ ಮತ್ತು ಕೋಮು ಸೂಕ್ಷ್ಮ ವಿಷಯಗಳು ಮತ್ತು ಘಟನೆಗಳನ್ನು ಎತ್ತಿ ತೋರಿಸುತ್ತದೆ.
ಇಂದು ನಗರದಲ್ಲಿ ಬಿಜೆಪಿ ಪುಸ್ತಕ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಪುಸ್ತಕದ ಬಗ್ಗೆ ನನಗೆ ಗೊತ್ತಿಲ್ಲ. ಕಾಮಾಲೆ ಕಣ್ಣಿನವರಿಗೆ ಎಲ್ಲವೂ ಹಳದಿ. ಟಿಪ್ಪು ನಂತಹ ಉಡುಗೆಯನ್ನು ಧರಿಸಿ ಕೈಯಲ್ಲಿ ಕತ್ತಿ ಹಿಡಿದವರು ಯಾರು, ಅದು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ. ಶೇಖ್ ಅಲಿಯವರ ಟಿಪ್ಪು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದು ಯಾರು? ಇದು ಇಬ್ಬಂದಿತನ ಅಲ್ಲವೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.