ಬೆಂಗಳೂರು: ‘ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ’ ಎಂಬ ಹೇಳಿಕೆಗೆ ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಕೊಲೆ ಯತ್ನ ಆರೋಪದಡಿ ಕೇಸ್ ದಾಖಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಠಾಣೆಗೆ ಕಾಂಗ್ರೆಸ್ ಮುಖಂಡರು ಇಂದು ತೆರಳಿ ದೂರು ಸಲ್ಲಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ದೂರು ದಾಖಲಾಗಿದೆ. ಡಾ ಅಶ್ವಥ್ ನಾರಾಯಣ ವಿರುದ್ಧ ಹೋರಾಟ, ಪ್ರತಿಭಟನೆಗೆ ಕಾಂಗ್ರೆಸ್ ಸಜ್ಜಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರತಿಭಟನೆ ಮಾಡುವುದಲ್ಲದೆ ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಬಳಗ ದೂರು ದಾಖಲಿಸಿದೆ.
ನಾಯಕರೇ ಈ ರೀತಿ ಮಾತನಾಡಿದ ಮೇಲೆ ಸಿದ್ದರಾಮಯ್ಯನವರ ಜೀವಕ್ಕೆ ಅಪಾಯವಿದೆ. ಅವರಿಗೆ ಭದ್ರತೆ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು, ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಇದರ ಜೊತೆಗೆ ಟಿಪ್ಪು ಸುಲ್ತಾನ್, ವೀರ ಸಾವರ್ಕರ್ ವಿಚಾರದಲ್ಲಿ ವಿವಾದಾತ್ಮಕವಾಗಿ, ಆಕ್ರೋಶಭರಿತರಾಗಿ ಭಾಷಣ ಮಾಡುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೂಡ ಕಾಂಗ್ರೆಸ್ ನಾಯಕರು ಇದೇ ಸಂದರ್ಭದಲ್ಲಿ ದೂರು ದಾಖಲಿಸಿದ್ದಾರೆ.