ಡಬಲ್ ಇಂಜಿನ್ ಸರ್ಕಾರದ ಫ್ಯೂಲ್ ಕಮ್ಯೂನಲ್ ಫ್ಯೂಲ್ ಆಗಿದ್ದು, ಅವರ ಸೈಲೆನ್ಸರ್ ಹೊಗೆ ವಿಷ; ಅದು ಯಾರನ್ನೂ ಬದುಕಿಸಲ್ಲ – ಯುಟಿ ಖಾದರ್

ಮಂಗಳೂರು: ಚರಂಡಿ, ರಸ್ತೆ ಮೊದಲಾದ ವಿಷಯಗಳ ಬಿಟ್ಟು, ನಿಮ್ಮ ಮಕ್ಕಳನ್ನು ಲವ್-ಜಿಹಾದ್ ನಿಂದ ಉಳಿಸುವ ಕಡೆ ಗಮನ ಹರಿಸಿ ಎಂಬ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ವಿಧಾನಸಭೆ ವಿರೋಧಪಕ್ಷದ ಉಪನಾಯಕನಾಗಿರುವ ಯುಟಿ ಖಾದರ್ ಅವರು ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಸ್ತೆ, ಚರಂಡಿಗಳ ಬಗ್ಗೆ ಚರ್ಚೆ ಬೇಡ ಎಂದು ಹೇಳುವ ಮೂಲಕ ಕಟೀಲ್ ಅವರು, ಅಭಿವೃದ್ಧಿ ಬಗ್ಗೆ ಕೇಳಬೇಡಿ ಎಂದು ಹೇಳುತ್ತಿದ್ದಾರೆ. ಬಿಜೆಪಿ ಅವರು ಅಧಿಕಾರಕ್ಕೆ ಬಂದ ಮೇಲೆ ಏನೆಲ್ಲ ಮಾಡುತ್ತೇನೆ ಹೇಳಿದ್ದಾರೋ ಅದು ಆಗಿಲ್ಲ, ದಕ್ಷಿಣ ಕನ್ನಡ ಜಿಲ್ಲೆಗೆ ಕುಚಲಕ್ಕಿ ತರಲು ಯೋಗ್ಯತೆ ಇಲ್ಲದ ಇವರು ಜನಪ್ರತಿನಿಧಿಗಳಾ? ಇವರಿಗೆ ಅಭಿವೃದ್ಧಿ ಮಾಡುವ ಯೋಗ್ಯತೆ ಇಲ್ಲ ಅಂತ ಜನರಿಗೆ ಹೇಳಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಫ್ಯೂಲ್ ಕಮ್ಯೂನಲ್ ಫ್ಯೂಲ್ ಆಗಿದ್ದು, ಅವರ ಸೈಲೆನ್ಸರ್ ಹೊಗೆ ವಿಷ, ಅದು ಯಾರನ್ನೂ ಬದುಕಿಸಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೂ ಮುಂದೆ ಇವರ ಇಂಜಿನ್‌ನನ್ನು ಜನ ಕಿತ್ತು ಬಿಸಾಡ್ತಾರೆ. ಬಿಜೆಪಿ ಅವರು ಜಾತಿ, ಧರ್ಮ ಆಧಾರದಲ್ಲಿ ವಿಭಾಗ ಮಾಡುವವರು. ಬಿರುಕು ಮೂಡಿಸಲು ಇವರು ಇದನ್ನೆಲ್ಲಾ ಮಾಡುತ್ತಿದ್ದಾರೆ. ನಿನ್ನೆ ನಳಿನ್ ಕುಮಾರ್ ಕಟೀಲ್ ಸಿಕ್ಕಿದಾಗ ಚಾಲೆಂಜ್ ಹಾಕಿದ್ದೇನೆ. ರಮಾನಾಥ್ ರೈ ಗೆದ್ದು ಉಸ್ತುವಾರಿ ಸಚಿವರಾಗುತ್ತಾರೆ. ನಮ್ಮದೇ ಸರ್ಕಾರ ಬರುತ್ತೆ ಅಂತ ಹೇಳಿದ್ದೇನೆ. ನಾನು ಸಚಿವ ಆದಾಗಲೂ ಸೂಟ್ ಹಾಕಿಲ್ಲ, ಇನ್ನೂ ಹಾಕಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಆರ್ಥಿಕವಾಗಿ ದಾರಿದ್ರ್ಯದ ಪರಿಸ್ಥಿತಿಗೆ ಬಂದಿದೆ. ಅಬ್ಬಕ್ಕ ಉತ್ಸವಕ್ಕೆ ಪ್ರತಿವರ್ಷ 50 ಲಕ್ಷ ರೂ. ಬಿಡುಗಡೆಯಾಗುತ್ತಿತ್ತು. ಆದರೆ ಈ ಸಲ ಸುನೀಲ್ ಕುಮಾರ್ ಕನ್ನಡ, ಸಂಸ್ಕೃತಿ ಸಚಿವರಾಗಿದ್ದಾರೆ. ಈ ಬಾರಿಯ ಅಬ್ಬಕ್ಕ ಉತ್ಸವಕ್ಕೆ ಬರೀ ಹತ್ತು ಲಕ್ಷ ರೂ ಕೊಟ್ಟಿದ್ದಾರೆ. ಇದು ದೇಶಕ್ಕಾಗಿ ತ್ಯಾಗ ಮಾಡಿದ ವೀರರಾಣಿ ಅಬ್ಬಕ್ಕನಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.

ಇವತ್ತು ಸಮರ್ಪಕ ಆಡಳಿತ ಮಾಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಇನ್ನೂ ಬಡವರಿಗೆ ಬಿಪಿಎಲ್ ಕಾರ್ಡ್ ಕೊಡುವ ವ್ಯವಸ್ಥೆ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಜನರಿಗೆ ಅಗತ್ಯ ಸೇವೆಗಳನ್ನು ಕೊಡುತ್ತಿತ್ತು. ಕೋವಿಡ್ ಅಂತ ಹೇಳಿ ಜನರಿಗೆ ಮಾಸ್ಕ್ ಹಾಕಲು ಹೇಳುತ್ತಿದ್ದಾರೆ. ಆದರೆ ಅದನ್ನು ಬಿಟ್ಟು ಆರೋಗ್ಯ ಸೇವೆಗೆ ಬೇಕಾದ ವ್ಯವಸ್ಥೆಗಳು ಆಗಿಲ್ಲ. ಭಾವನಾತ್ಮಕ ವಿಚಾರ ಇಟ್ಟುಕೊಂಡು ಬಿಜೆಪಿ ಸರ್ಕಾರ ನಡೆಸ್ತಿದೆ. ಅದನ್ನ ಬಿಟ್ಟು ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

Latest Indian news

Popular Stories