ವಿಜಯಪುರ: ಡಬಲ್ ಎಂಜಿನ್ ಸರಕಾರದಲ್ಲಿ ಬಡವರಿಗಾಗಿ ಒಂದೂ ಹೊಸ ಮನೆ ನಿರ್ಮಿಸಿಲ್ಲ. ಚುನಾವಣೆ ಬಳಿಕ ನಾವು ಮತ್ತೆ ಅಧಿಕಾರಕ್ಕೆ ಬಂದು ಬಡ ಜನರಿಗೆ ಸೂರು ಒದಗಿಸುತ್ತೇವೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದರು.
ತಿಕೋಟಾ ತಾಲುಕಿನ ಕಣಮುಚನಾಳ, ಧನ್ಯಾಳ ಮತ್ತು ತಿಗಣಿಬಿದರಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು.
ಈ ಸರಕಾರದಲ್ಲಿ ಹೊಸ ಮನೆಗಳ ನಿರ್ಮಾಣ ಮಾಡವುದನ್ನು ಬಿಡಲಿ, ನಾನಾ ಹಂತಗಳಲ್ಲಿ ಪ್ರಗತಿಯಲ್ಲಿರುವ ಮನೆಗಳಿಗೂ ಹಣ ಬಿಡುಗಡೆ ಮಾಡಿಲ್ಲ. 2013-18ರ ಅವಧಿಯಲ್ಲಿ ನಾವು ಅಧಿಕಾರದಲ್ಲಿದ್ದಾಗ 15 ಲಕ್ಷ ಮನೆಗಳನ್ನು ನಿರ್ಮಿಸಿದ್ದೇವೆ. ಜನರ ಕಲ್ಯಾಣಕ್ಕಾಗಿ ಅನ್ನ ಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಆದರೆ, ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ ಸೇರಿದಂತೆ ಅಭಿವೃದ್ಧಿ ಕುಂಠಿತವಾಗಿರುವುದು ಬಿಜೆಪಿ ಸರಕಾರದ ಸಾಧನೆಯಾಗಿದೆ ಎಂದು ಅವರು ಹೇಳಿದರು.
ಅಭಿವೃದ್ಧಿ ಮಾಡಿದವರನ್ನು ಬೆಂಬಲಿಸಿ ಪ್ರೋತ್ಸಾಹಿಸಿದರೆ ಹೆಚ್ಚಿಗೆ ಕೆಲಸ ಮಾಡಲು ಹುಮ್ಮಸ್ಸು ಸಿಗುತ್ತದೆ. ಆದರೆ, ಯಾವುದೇ ಕೆಲಸ ಮಾಡದವರನ್ನು ಬೆಂಬಲಿಸಿದರೆ ಏನು ಪ್ರಯೋಜನವಿಲ್ಲ. ಜನರು ಆ ತಪ್ಪನ್ನು ಮಾಡಬಾರದು. ಕೆಲಸ ಮಾಡುವವರಿಗೆ ಗೌರವ ನೀಡಬೇಕು ಎಂದು ಅವರು ಹೇಳಿದರು.
ಕಣಮುಚನಾಳ ಗ್ರಾಮಕ್ಕೆ ಈ ಹಿಂದೆ ಸೇತುವೆ ನಿರ್ಮಾಣ ಮಾಡಿದ್ದೇನೆ. ಸಿ.ಸಿ ರಸ್ತೆ ಮಾಡಿದ್ದೇವೆ. ಮನೆ ಮನೆಗಳಿಗೆ ಕುಡಿಯುವ ನೀರು ಸಿಗಲು ವ್ಯವಸ್ಥೆ ಮಾಡಿದ್ದೇವೆ. ಅಷ್ಟೇ ಅಲ್ಲ, ಸಮ್ಮಿಶ್ರ ಸರಕಾರ ಅವಧಿಯಲ್ಲಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ರೂ.250 ಕೋಟಿ ಅನುದಾನ ಮೀಸಲಿಟ್ಟು ಇದೇ ಯೋಜನೆಯಡಿ ಈ ಭಾಗದ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿದ್ದೇವೆ. ಸಣ್ಣ ಗ್ರಾಮ, ದೊಡ್ಡ ಗ್ರಾಮ ಎಂದು ಯಾವುದೇ ಭೇದ-ಭಾವವಿಲ್ಲದೆ ಅಭಿವೃದ್ಧಿ ಮಾಡಿದ್ದೇವೆ. ಮುಂದೆಯೂ ಮಾಡಲಿದ್ದೇವೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.