ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಕಛೇರಿಗಳ ಮೇಲಿನ ಎನ್ ಐ ಎ ನಡೆಸುತ್ತಿರುವ ದಾಳಿ ಅಸಂವಿಧಾನಿಕ ಮತ್ತು ದುರುದ್ದೇಶಪೂರಕ – ಕರ್ನಾಟಕ ಜನಶಕ್ತಿ

  • ಕರ್ನಾಟಕ ಜನಶಕ್ತಿ

ನ್ಯಾಷನಲ್ ಇನ್ವೆಸ್ಟಿಗೇಟಿವ್ ಏಜೆನ್ಸಿ [ಎನ್ ಐ ಎ] ಮೂಲಕ ಕೇಂದ್ರ ಸರ್ಕಾರವು ಪಿ ಎಫ್ ಐ ಹಾಗೂ ಎಸ್ ಡಿ ಪಿ ಐ ಸಂಘಟನೆಗಳ ಕಛೇರಿಗಳ ಮೇಲೆ ದೇಶ ಮತ್ತು ಕರ್ನಾಟಕದಾಂತ್ಯ ದಾಳಿ ನಡೆಸುತ್ತಿದೆ. ಅದರ ಹಲವು ಮುಖಂಡರುಗಳನ್ನು ಬಂಧಿಸುತ್ತಿದೆ. ಇದು ಒಂದು ಕೋಮಿನ ಜನರನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಸಂಚುಪೂರಿತ ಹಾಗೂ ನಂಜುಪೂರಿತ ದಾಳಿಗಳಾಗಿವೆ. ಇಡೀ ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಸಂಘ ಪರಿವಾರದ ಮತಾಂಧ ಶಕ್ತಿಗಳು ದೊಂಬಿ, ದಾಳಿ, ಕೊಲೆ, ಚಿತ್ರಹಿಂಸೆಗಳನ್ನು ನಡೆಸುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ಕೇಂದ್ರ ಸರ್ಕಾರ ಈಗ ಅಲ್ಪಸಂಖ್ಯಾತ ಸಂಘಟನೆಗಳ ಮೇಲೆ ಮಾತ್ರ ದಾಳಿ ನಡೆಸುತ್ತಿವೆ. ಅವರೆಡು ಕಾನೂನಾತ್ಮಕವಾಗಿ ನೊಂದಾಯಿತ ಸಂಘಟನೆಗಳಾಗಿವೆ. ಅವುಗಳ ವಿರುದ್ಧ ಭಯೋತ್ಪಾದನೆಯ ಆರೋಪ ಮಾಡಲಾಗುತ್ತಿದ್ದರೂ ಇದುವರೆಗೆ ಯಾವುದೇ ಸಮರ್ಥನೀಯ ಸಾಕ್ಷ್ಯವನ್ನು ಒದಗಿಸುವುದರಲ್ಲಿ ಗೃಹ ಇಲಾಖೆಯು ವಿಫಲಗೊಂಡಿದೆ. ಹೀಗಿದ್ದಾಗಿಯೂ, ಯಾವುದೇ ಪೂರ್ವ ಸಾಕ್ಷ್ಯವಿಲ್ಲದೆ ದೇಶವ್ಯಾಪಿ ದಾಳಿ ನಡೆಸುತ್ತಿರುವುದು ಅಸಂವಿಧಾನಿಕ ಫ್ಯಾಸೀವಾದಿ ದಾಳಿಯಾಗಿದೆ.

ಕರ್ನಾಟಕ ಜನಶಕ್ತಿಯು ಕಾನೂನು ಭಂಗ ಮಾಡುವ ಯಾವುದೇ ಸಂಘಟನೆ ಮೇಲೆ ಕ್ರಮ ತೆಗೆದುಕೊಳ್ಳುವುದರ ವಿರುದ್ಧವಿಲ್ಲ. ಆದರೆ ನಮ್ಮ ದೇಶದಲ್ಲಿ ನಡೆಯುತ್ತಿರುವುದೇ ಬೇರೆ. ಅಪರಾಧಿಗಳೇ ಅಧಿಕಾರದಲ್ಲಿ ಕೂತಿದ್ದಾರೆ. ಅಪರಾಧಗಳನ್ನು ಪ್ರಚೋದಿಸುತ್ತಿದ್ದಾರೆ. ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ. ಅಪರಾಧಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಕರ್ನಾಟಕ ಸರ್ಕಾರವು 34 ಗಂಭೀರ ಕೋಮು ಪ್ರಚೋದನೆಯ ಪ್ರಕರಣಗಳನ್ನು ರದ್ದುಗೊಳಿಸಿ ಕೋಮು ದ್ವೇಷಕ್ಕೆ ಕ್ಲಿಯರ್ ಚಿಟ್ ನೀಡಿದೆ. ಈ ಪ್ರಕರಣಗಳನ್ನ ಹಿಂಪಡೆಯಲು ಮುಖ್ಯಮಂತ್ರಿ ಬೊಮ್ಮಾಯಿ, ಗೃಹ ಮಂತ್ರಿ ಆರಗ ಜ್ಞಾನೇಂದ್ರ ಸೇರಿದಂತೆ ಸರ್ಕಾರದ ಸಚಿವರುಗಳೇ ಆದೇಶ ಮಾಡಿದ್ದಾರೆ‌. ಪೊಲೀಸರ ಮೇಲೆ ದಾಳಿ, ಗಲಭೆಗಳು ಉಂಟಾಗಲು ಕಾರಣವಾಗುವಂಥ ದ್ವೇಷದ ಭಾಷಣ…ಇವೆಲ್ಲವೂ ಬಿಜೆಪಿ ಕಾರ್ಯಕರ್ತರು, ABVP ಕಾರ್ಯಕರ್ತರು, ವಿವಿದ ನ ಕೋಮುವಾದಿ ಸಂಘಟನೆಗಳ ಪ್ರಮುಖ ವ್ಯಕ್ತಿಗಳ ಮೇಲಿನ ಪ್ರಕರಣಗಳಾಗಿವೆ. ಅದೇ ರೀತಿ ಕಳೆದ ಎರಡು ವರ್ಷದಿಂದೀಚೆಗೆ 100 ಕ್ಕೂ ಅಧಿಕ ಪ್ರಕರಣಗಳನ್ನ ಹಿಂಪಡೆಯಲಾಗಿದೆ.

ಮತ್ತೊಂದೆಡೆ ನ್ಯಾಯಕ್ಕಾಗಿ ಹೋರಾಡುತ್ತಿರುವವವರ ಮೇಲೆ, ದಲಿತ, ದಮನಿತ ಸಮುದಾಯದ ಜನರ ಮೇಲೆ, ವಿಶೇಷವಾಗಿ ಮುಸ್ಲಿಂ ಸಮುದಾಯದ ಕಾರ್ಯಕರ್ತರು ಹಾಗೂ ಸಂಘಟನೆಗಳ ಮೇಲೆ ದಮನಕೋರ ದಾಳಿಗಳನ್ನು ನಡೆಸುತ್ತಿದೆ. ಇದು ನಗ್ನ ಫ್ಯಾಸೀವಾದವಾಗಿದೆ.ಇದನ್ನು ಕರ್ನಾಟಕ ಜನಶಕ್ತಿಯು ತೀವ್ರ ಮಾತುಗಳಲ್ಲಿ ಖಂಡಿಸುತ್ತದೆ.

ಪಿಎಫ್ಐ ಕಾರ್ಯವೈಖರಿ ಕುರಿತು ನಮಗೂ ಕೆಲವು ತಕರಾರೂಗಳೂ ಇವೆ. ಹಾಗಂತ ಅವರ ಪ್ರಜಾತಾಂತ್ರಿಕ ಹಕ್ಕಿನ ಹರಣವಾದಾಗ ಮೌನವಾಗಿರಲು ಸಾಧ್ಯವಿಲ್ಲ. ಎಲ್ಲಾ ಪ್ರಜಾತಂತ್ರವಾದಿಗಳೂ ಕೇಂದ್ರದ ಈ ಧೋರಣೆಯನ್ನು ಖಂಡಿಸಬೇಕು ಹಾಗೂ ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಬೇಕೆಂದು ಕೋರುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಜನಶಕ್ತಿ ತಿಳಿಸಿದೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!