ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಕಲ್ಲೇಟು ಬಿದ್ದು ಕಾಂಗ್ರೆಸ್ ಅಭ್ಯರ್ಥಿ ಪರಮೇಶ್ವರ್ ಅವರ ತಲೆಗೆ ಗಾಯವಾಗಿ ರಕ್ತ ಸೋರಿಕೆಯಾಗಿದೆ.
ಚುನಾವಣೆ ಪ್ರಚಾರಕ್ಕೆ ತೆರಳಿದ್ದ ವೇಳೆಯಲ್ಲಿ ಘಟನೆ ನಡೆದಿದೆ. ತಲೆಗೆ ಕಲ್ಲೇಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದು, ಪರಮೇಶ್ವರ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪರಮೇಶ್ವರ್ ಅವರನ್ನು ಕಾರ್ಯಕರ್ತರು ಎತ್ತಿಕೊಂಡು ಕುಣಿಯುತ್ತಿದ್ದ ಸಂದರ್ಭದಲ್ಲಿ ಹೂವು ಎಸೆಯಲಾಗಿದೆ. ಈ ವೇಳೆ ಗುಂಪಿನಲ್ಲಿದ್ದ ದುಷ್ಕರ್ಮಿ ಕಲ್ಲೆಸೆದಿದ್ದಾನೆ. ಕಲ್ಲು ಬಿದ್ದ ಕೂಡಲೇ ಪರಮೇಶ್ವರ ತಲೆ ಹಿಡಿದುಕೊಂಡಿದ್ದಾರೆ. ತಲೆಗೆ ಪೆಟ್ಟು ಬಿದ್ದು ಗಾಯವಾಗಿ ರಕ್ತ ಸೋರಿಕೆಯಾಗಿದ್ದು, ಅವರನ್ನು ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕೊರಟಗೆರೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಕೂಡ ದುಷ್ಕರ್ಮಿ ಪತ್ತೆಗೆ ಮುಂದಾಗಿದ್ದಾರೆ.