ಮತಕ್ಕಾಗಿ ಹಣದ ಆಮೀಷ: ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ  ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ನವದೆಹಲಿ: ಮತದಾರರಿಗೆ ತಲಾ ಆರು ಸಾವಿರ ನೀಡುವುದಾಗಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಕ್ರಮಕೈಗೊಳ್ಳು ವಂತೆ ಆಗ್ರಹಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ನೇತೃತ್ವದ ನಿಯೋಗವು ಮಂಗಳವಾರ ದೂರು ನೀಡಿದೆ.

ಮುಂಬರುವ ಚುನಾವಣೆಯಲ್ಲಿ ಮತದಾರರಿಗೆ ತಲಾ  6 ಸಾವಿರ ನೀಡಿ ಮತ ಕೇಳಲಾಗುವುದು. ಎದುರಾಳಿಗಿಂತ 10 ಕೋಟಿ ರು. ಹೆಚ್ಚು ಖರ್ಚು ಮಾಡಲು ನಾವು ಸಿದ್ಧರಿದ್ದೇವೆ ಎಂಬ ಹೇಳಿಕೆ ನೀಡಿರುವ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಜ. 25ರಂದು ದೂರು ನೀಡಿತ್ತು. ಆಯೋಗಕ್ಕೂ ದೂರು ನೀಡಿತ್ತು. ಆದರೆ, ಆಯೋಗದ ಅಧಿಕಾರಿಗಳು, ಪೊಲೀಸರು ಈವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಮಿಷ ಒಡ್ಡಿ ರಾಜ್ಯದ 5 ಕೋಟಿ ಮತದಾರರನ್ನು ಖರೀದಿಸುವ ಸಂಚು ನಡೆಸಿರುವ ರಮೇಶ ಜಾರಕಿಹೊಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರೇರಣೆ ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ನಿಯೋಗ ಆಗ್ರಹಿಸಿದೆ.

ಚುನಾವಣಾ ಪ್ರಕ್ರಿಯೆಯನ್ನು ನಾಶಪಡಿಸಲು ಮತ್ತು ಲಂಚ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಲು ಕರ್ನಾಟಕದ ಬಿಜೆಪಿ ಸರ್ಕಾರ  ಹಾಗೂ ಬಿಜೆಪಿಯ ಕೇಂದ್ರ ನಾಯಕತ್ವವು ನಡೆಸುತ್ತಿರುವ ದುಷ್ಕೃತ್ಯದ ಪಿತೂರಿಯ ಬಗ್ಗೆ ತ್ವರಿತ ತನಿಖೆ ನಡೆಸುವಂತೆ ಆಯೋಗವನ್ನು ವಿನಂತಿಸಲಾಗಿದೆ” ಎಂದು ಅವರು ಹೇಳಿದರು.

Latest Indian news

Popular Stories