ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ ಘೋಷಣೆ

ಧಾರವಾಡ: ಬೆಂಗಳೂರಿನಲ್ಲಿ ಮೆಟ್ರೊ ಮೇಲ್ಸೆತುವೆ ಪಿಲ್ಲರ್ ಕುಸಿತದಿಂದ ಮೃತಪಟ್ಟ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೃತಪಟ್ಟವರು ಧಾರವಾಡ ಮತ್ತು ಗದಗ ಮೂಲದವರೆಂದು ತಿಳಿದಿದೆ. ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಈ ದುರ್ಘಟನೆ ನಡೆದಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಮೃತರ ಕುಟುಂಬಕ್ಕೆ ಮೆಟ್ರೋ ಸಂಸ್ಥೆಯೂ ಸಹ ಪರಿಹಾರ ನೀಡಲಿದೆ. ಜೊತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಕೂಡ ತಲಾ ರೂ.10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು.

ತನಿಖೆಗೆ ಕ್ರಮ: ಈ ದುರಂತದ ಬಗ್ಗೆ ತನಿಖೆ ಕೈಗೊಂಡು ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿ, ಮೃತರ ಸಾವಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವುದಾಗಿಯೂ ಭರವಸೆ ನೀಡಿದರು.

ಈ ದುರ್ಘಟನೆಗೆ ಶೇ.40 ಕಮಿಷನ್ ಪರಿಣಾಮದ ಕಳಪೆ ಕಾಮಗಾರಿ ಕಾರಣ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಎಲ್ಲವನ್ನೂ ಕಾಮಾಲೆ ಕಣ್ಣಿಂದ ನೋಡುವುದು ಬಿಡಬೇಕು. ಕೈ ಸರ್ಕಾರದಲ್ಲಿ ಸಾಕಷ್ಟು ದುರಂತ ನಡೆದಿವೆ ಎಂಬುದು ಮರೆಯಬಾರದು. ದುರಂತ ರಾಜಕೀಯಕ್ಕೆ ಬಳಸುವುದು ಸರಿಯಲ್ಲ‌ ಸಿ‌ಎಂ ಬೊಮ್ಮಾಯಿ ತಿರುಗೇಟು ನೀಡಿದರು.

Latest Indian news

Popular Stories