ಯಾವೊಂದು ಸಮೀಕ್ಷೆಯೂ ಜೆಡಿಎಸ್ ಪರ ಭವಿಷ್ಯ ನುಡಿಯದ ಕಾರಣ ಹೆಚ್’ಡಿಕೆ ಹತಾಶೆಗೊಳಗಾಗಿದ್ದಾರೆ: ಆರ್.ಅಶೋಕ್

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಜಯ ಸಿಗಲಿದೆ ಎಂದು ಇತ್ತೀಚಿನ ಯಾವುದೇ ಸಮೀಕ್ಷೆಗಳು ಭವಿಷ್ಯ ನುಡಿಯದ ಕಾರಣ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಹತಾಶೆಗೊಳಗಾಗಿದ್ದಾರೆಂದು ಬಿಜೆಪಿ ನಾಯಕ ಆರ್.ಅಶೋಕ್ ಅವರು ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರೆ ಜೆಡಿಎಸ್‌ ಕುಟುಂಬ ಆಧಾರಿತ ಪಕ್ಷ. ನಮ್ಮಲ್ಲಿ ಮುಖ್ಯಮಂತ್ರಿ, ಪ್ರಧಾನಿ, ಸಚಿವರು ಆಗಬೇಕಾದರೆ ಪ್ರತಿಭೆಯನ್ನು ಗಮನಿಸಲಾಗುತ್ತದೆ. ಆದರೆ, ಜೆಡಿಎಸ್‌ನಲ್ಲಿ ಅದಕ್ಕೆ ಅವಕಾಶ ಇಲ್ಲ. ಕುಟುಂಬದಲ್ಲಿಯೇ ಯಾರಿಗೆ ಯಾವ ಸ್ಥಾನ ಎಂಬುದನ್ನು ತೀರ್ಮಾನಿಸಲಾಗಿದೆ. ಕಾಂಗ್ರೆಸ್‌, ಬಿಜೆಪಿ ಮತ್ತು ಮಾಧ್ಯಮಗಳ ಸಮೀಕ್ಷೆಗಳು ಜೆಡಿಎಸ್‌ 20 ಸ್ಥಾನಕ್ಕೆ ಸೀಮಿತ ಎನ್ನುತ್ತಿವೆ. ಆದರೆ, ಅವರು ಮಾತ್ರ 130 ಗುರಿ ಎನ್ನುತ್ತಾರೆ. ಅದು ಯಾವ ಪರಮಾತ್ಮನ ಸಮೀಕ್ಷೆಯೋ ಗೊತ್ತಿಲ್ಲ. ಮುಂದಿನ ಚುನಾವಣೆ ಬಳಿಕ ಸರ್ಕಾರ ರಚನೆ ವೇಳೆ ರಾಜಕೀಯ ಆಟವಾಡಬಹುದು ಎಂಬ ಭ್ರಮೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತಿನಲ್ಲಿ ಹಿಡಿತ ತಪ್ಪಿ ಹುಚ್ಚುಚ್ಚು ಹೇಳಿಕೆ ನೀಡುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಬೇಕಾದರೂ ಅವರ ಮನೆಯವರೇ ಆಗಬೇಕು. ಅವರದ್ದು ಕುಟುಂಬ ರಾಜಕೀಯ. ಡಿಎಂಕೆ, ಲಾಲುಪ್ರಸಾದ್‌ ಯಾದವ್‌ ಸೇರಿದಂತೆ ಕೆಲ ರಾಜ್ಯಗಳಲ್ಲಿನ ರಾಜಕೀಯ ಪಕ್ಷಗಳದ್ದು ಸಹ ಇದೇ ರೀತಿಯಾದ ಕುಟುಂಬ ಪ್ರೇಮ. ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸಿದರು. ಅದೇ ರೀತಿಯಲ್ಲಿಯೇ ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ.

ಬ್ರಾಹ್ಮಣರ ಮೇಲೆ ಬೇರೆ ಜಾತಿ ಎತ್ತಿಕಟ್ಟಿ ಒಡಕು ಮೂಡಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಯಾದವರು ತಮ್ಮ ವರ್ಚಸ್ಸಿಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರ ವರ್ಚಿಸ್ಸಿಕ್ಕಿಂತ ತಳಮಟ್ಟಕ್ಕೆ ಇಳಿಯುತ್ತಿದ್ದಾರೆ. ಎಸ್‌.ಎಂ.ಕೃಷ್ಣ ಸೇರಿದಂತೆ ಇತರೆ ಮಾಜಿ ಮುಖ್ಯಮಂತ್ರಿಗಳ ನಡವಳಿಕೆ ನೋಡಿ ಕಲಿಯಬೇಕು. ತಮ್ಮ ಹೇಳಿಕೆ ಕುರಿತು ಕೂಡಲೇ ಕರ್ನಾಟಕದ ಜನತೆ ಹಾಗೂ ಪ್ರಹ್ಲಾದ್ ಜೋಶಿಯವರ ಬಳಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಸ್ಪರ್ಧಿಸುವ ರಾಮನಗರದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಹೇಳಿದರು.

ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ಚುನಾವಣೆ ಪೂರ್ಣಗೊಂಡ ಬಳಿಕ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಚುನಾಯಿತ ಶಾಸಕರು ಕೂಡ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹಲವು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದಾರೆಂದರು.

Latest Indian news

Popular Stories