ವಿಧಾನಸಭೆ ಚುನಾವಣೆ: ಬಿ.ಎಲ್ ಸಂತೋಷ್ ರಂಗಪ್ರವೇಶ; ಮೈಸೂರಿನಲ್ಲಿ ಕಾರ್ಯಕರ್ತರಿಗೆ ಪಾಠ, ಅಭ್ಯರ್ಥಿ….!

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಂಪೂರ್ಣ ಬಹುತಮದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಹವಣಿಸುತ್ತಿದೆ.  

ಸದ್ಯಕ್ಕಿರುವ ರಾಜಕೀಯ ಪರಿಸ್ಥಿತಿ ಬಿಜೆಪಿಗೆ ಅನುಕೂಲಕರವಾಗಿದೆ ಎಂದು ಭಾವಿಸಲಾಗಿದೆ. ಕಳೆದ ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಕಾಂಗ್ರೆಸ್ ಗಂಭೀರ ಆರೋಪ ಮಾಡಿದಾಗ ಬಿಜೆಪಿ ಸಂಪೂರ್ಣ ವಿಶ್ವಾಸ ಕಳೆದುಕೊಂಡಿತ್ತು, ಆದರೆ ಮತ್ತೆ ಚೇತರಿಸಿಕೊಂಡಿರುವ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5 ಸಾವಿರ ಕೋಟಿ ಅನುದಾನ ಘೋಷಿಸಿದ ನಂತರ ಬಿಜೆಪಿಯಲ್ಲಿ  ಉತ್ಸಾಹ ಪುಟಿದೇಳುತ್ತಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಮಾತನಾಡಿ, ಗಂಭೀರ ಆರೋಪ ಮಾಡಿದ ಕಾಂಗ್ರೆಸ್, ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಅಥವಾ ನ್ಯಾಯಾಲಯಗಳಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಸಂಪರ್ಕಿಸಲು ವಿಫಲವಾಗಿದೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಲು ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ದೂರು ನೀಡಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯವಿದೆ, ಈ ಕಾರಣದಿಂದಾಗಿ ಪಕ್ಷವು ತನ್ನ ಅಭ್ಯರ್ಥಿ ಪಟ್ಟಿಯನ್ನು ಪ್ರಕಟಿಸಿಲ್ಲ ಎಂದು ಅವರು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಹಗಲೆಲ್ಲ ಟಿಪ್ಪು ಭಜನೆ ಮಾಡುತ್ತಾರೆ. ಅವರಿಗೆ ಪ್ರಿಯರಾದವರ ಭಜನೆ ಮಾಡಲಿ, ನಾವೇನು ಪ್ರಶ್ನಿಸುವುದಿಲ್ಲ. ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್, ಮದಕರಿ ನಾಯಕ, ಒನಕೆ ಒಬವ್ವ ಮುಂತಾದವರನ್ನು ಗೌರವಿಸಬೇಕಿತ್ತು. ಟಿಪ್ಪುವಿನಂತೆಯೇ ದೇವನಹಳ್ಳಿಯಲ್ಲಿಯೇ ಹುಟ್ಟಿದ ಕೆಂಪೇಗೌಡರ ಗೌರವ ಕೊಡಲು ಲಿಂಗಾಯತ ಸರ್ಕಾರವೇ ಬರಬೇಕಾಯಿತು ಎಂದು ಲೇವಡಿ ಮಾಡಿದರು.

ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ ಅವರು, ಅಭ್ಯರ್ಥಿಗಳನ್ನು ನಿರ್ಧರಿಸಲು ಸಂಸದೀಯ ಮಂಡಳಿ ಇಲ್ಲದ ಕಾರಣ ಪಕ್ಷದ ಪಟ್ಟಿಯನ್ನು ಮನೆಯಲ್ಲಿಯೇ ಸಿದ್ಧಪಡಿಸಲಾಗಿದೆ,  ಪಕ್ಷದ ಅಧ್ಯಕ್ಷರು ಮನೆಯಲ್ಲಿ ಸಹಿ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಅವರು, ಚುನಾವಣೆಯನ್ನು ಯುದ್ಧವಾಗಿ ನೋಡಬೇಕು ಮತ್ತು ಜೆಡಿಎಸ್‌ನಂತಹ ಪ್ರತಿಸ್ಪರ್ಧಿ ಪಕ್ಷಗಳೊಂದಿಗೆ  ಹೊಂದಾಣಿಕೆ ಮಾಡಿಕೊಳ್ಳಬಾರದು, ವಿಶೇಷವಾಗಿ ಮೈಸೂರಿನಲ್ಲಿ ಬಿಜೆಪಿ ಹೆಚ್ಚಿನ ಶಾಸಕರನ್ನು ಆಯ್ಕೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಬಿಜೆಪಿಯ ಭವಿಷ್ಯವನ್ನು ಕಾರ್ಯಕರ್ತರು ನಿರ್ಧರಿಸುತ್ತಾರೆ ಮತ್ತು ಸಂಪೂರ್ಣ ಬಹುಮತದಿಂದ ಮಾತ್ರ ಪಕ್ಷವು ಬಯಸಿದ್ದನ್ನು ಕಾರ್ಯಗತಗೊಳಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ” ಎಂದು ಸಂತೋಷ್ ತಿಳಿಸಿದರು.

ನಾವು ಈಗಾಗಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದೇವೆ. ಮಂಡ್ಯದಲ್ಲಿ ಚಾಲನೆ ಕೊಟ್ಟಿದ್ದು ಬಹುತೇಕರಿಗೆ ಅಚ್ಚರಿಯೂ ಆಯಿತು; ಕೆಲವರಿಗೆ ಕಸಿವಿಯೂ ಆಗಿದೆ. ಅದರಲ್ಲೂ ಪ್ರಾದೇಶಿಕ ಪಕ್ಷಕ್ಕೆ ಮುಳ್ಳು ಚುಚ್ಚಿದಂತಾಯಿತು. ಕಾಂಗ್ರೆಸ್‌ಗೆ ಕೂಡ ಆತಂಕ ಉಂಟಾಗಿದೆ. ಅಲ್ಲಿ ಕಾರ್ಯಕ್ರಮ ಮಾಡುತ್ತೇವೆಂದು ಯಾರೂ ನಿರೀಕ್ಷಿಸಿರಲಿಲ್ಲ’ ಎಂದರು.

ನಮ್ಮವರೇ ಶಾಸಕರಿರಬೇಕು. ನಮ್ಮದೇ ಸರ್ಕಾರ ಬರಬೇಕು. ಇದನ್ನು ಅರ್ಥ ಮಾಡಿಕೊಳ್ಳದಿರುವವರು ಹಾಳಾಗಿ‌ ಹೋಗುತ್ತಾರೆ. ಯಾರೋ ಪ್ರಮುಖರ ಕಾರಣದಿಂದ ಮೈಸೂರಿನಲ್ಲಿ ಪಕ್ಷ ಗೆಲ್ಲುತ್ತಿರಲಿಲ್ಲ. ಕಾರ್ಯಕರ್ತರು ಕೆಲಸ ಮಾಡಿದ್ದರಿಂದ ಗೆಲ್ಲುತ್ತಿತ್ತು. ಜೈ ಎನಿಸಿಕೊಂಡವರು ದಾರಿ ತಪ್ಪಿದಾಗ ನಮ್ಮ ದಾರಿ ನೋಡಿಕೊಳ್ಳಬೇಕಾಗುತ್ತದೆ. ಪಕ್ಷದ ಹಣೆಬರಹ ಬರೆಯುವವರು ಕಾರ್ಯಕರ್ತರು ಮಾತ್ರವೇ ಎಂದು ಹೇಳಿದರು.  ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

Latest Indian news

Popular Stories