ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದಲಿತರ ಕುರಿತು ಅವಹೇಳನ; ಆರು ವಿದ್ಯಾರ್ಥಿಗಳು ಸಸ್ಪೆಂಡ್

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದಲಿತರ ಕುರಿತು ಅವಹೇಳನಕಾರಿಯಾಗಿ ಸ್ಕಿಟ್ ಪ್ರದರ್ಶನ ಮಾಡಿದ ಬೆಂಗಳೂರಿನ ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಆರು ವಿದ್ಯಾರ್ಥಿಗಳನ್ನು ಸಂಸ್ಥೆ ಅಮಾನತು ಮಾಡಿರುವ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಘಟನೆಯ ಕುರಿತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆರು ವಿದ್ಯಾರ್ಥಿಗಳನ್ನು ವಿವಿ ಅಮಾನತು ಮಾಡಿದೆ. ಈ ವಿಷಯದ ಕುರಿತು ತನಿಖೆ ಮಾಡಲು ಯುಜಿಸಿ ಮಾರ್ಗಸೂಚಿಗಳ ಪ್ರಕಾರ ವಿಶ್ವವಿದ್ಯಾಲಯವು ತಜ್ಞರನ್ನು ಒಳಗೊಂಡ ಶಿಸ್ತು ಸಮಿತಿಯನ್ನು ರಚಿಸಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ತಿಳಿಸಿದ್ದಾರೆ.

ಮತ್ತೊಂದೆಡೆ ವಿವಿಯ ವಿರುದ್ಧ ಬೆಂಗಳೂರು ನಗರದ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೆ.20ರವರೆಗೆ ಕಾಲೇಜು ಆಯೋಜಿಸಿದ್ದ ಯುವಜನೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಪ್ರದರ್ಶನ ನೀಡುತ್ತಿದ್ದರು. ಘಟನೆ ಗುರುವಾರ ಬೆಳಕಿಗೆ ಬಂದಿದೆ.

ದಿ ಡೆಲ್ರಾಯ್ಸ್ ಬಾಯ್ಸ್ ತಂಡ ಪ್ರದರ್ಶಿಸಿದ ಸ್ಕಿಟ್ ನಲ್ಲಿ, ಜಾತಿವಾದಿ ಸಂಭಾಷಣೆಗಳಿದ್ದವು, ಭಾರತೀಯ ಸಂವಿಧಾನದ ಶಿಲ್ಪಿ ಮತ್ತು ರಾಷ್ಟ್ರನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡಿ ಅಸ್ಪೃಶ್ಯತೆ ಪದವನ್ನು ಬಳಸಲಾಗಿತ್ತು. ಮ್ಯಾಡ್ ಆಡ್ಸ್ ಎಂಬ ಕಾರ್ಯಕ್ರಮದಲ್ಲಿ ಹಾಸ್ಯಮಯ ರೀತಿಯಲ್ಲಿ ಕಾಲ್ಪನಿಕ ಉತ್ಪನ್ನಗಳನ್ನು ಜಾಹೀರಾತು ಮಾಡುವ ಕುರಿತು ಸ್ಕಿಟ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಈ ಬಗ್ಗೆ ದಲಿತ ಸಂಘಟನೆಗಳ ಸದಸ್ಯರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸ್ಕಿಟ್ ಮಾಡಿರುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯೂ ದೂರು ನೀಡಿರುವ ಮಾಹಿತಿ ಲಭ್ಯವಾಗಿದೆ. ಎಫ್‌ಐಆರ್‌ ದಾಖಲಾಗಿರುವ ಕುರಿತು ಸಿದ್ದಾಪುರ ಪೊಲೀಸರು ‘ನಾನುಗೌರಿ.ಕಾಂ’ಗೆ ತಿಳಿಸಿದ್ದಾರೆ.

ಕೃಪೆ: ನಾನು ಗೌರಿ

Latest Indian news

Popular Stories