ಸಿದ್ದೇಶ್ವರ ಶ್ರೀಗಳು ದೊಡ್ಡ ಧಾರ್ಮಿಕ ಸಂತ: ಸಿದ್ಧರಾಮಯ್ಯ

ವಿಜಯಪುರ : ಅನಾರೋಗ್ಯದಿಂದ ನಿತ್ರಾಣವಾಗಿರುವ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ ಮತ್ತು ಕಾಂಗ್ರೆಸ್ ಮುಖಂಡರು ಭೇಟಿಯಾಗಿ, ದರ್ಶನ ಪಡೆದರು.


ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆ ಮಾತನಾಡಿರುವೆ. ಶ್ರೀಗಳ ಆರೋಗ್ಯ ಸ್ಥಿರವಾಗಿದೆ, ಅವರು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದರು. ಧರ್ಮ ಎಂಬುದು ಜೀವನ ಮಾರ್ಗ, ಮನುಷ್ಯನ ಒಳಿತಿಗೆ ಸಹಕಾರಿ ಎಂದು ಜನತೆಗೆ ತಿಳಿಸುತ್ತಿದ್ದರು ಎಂದರು. ಶ್ರೀಗಳು ಜಾತ್ಯತೀತ ನಿಲುವುಳ್ಳವರಾಗಿದ್ದಾರೆ, ಆಳವಾದ ಜ್ಞಾನ ಹೊಂದಿದ್ದಾರೆ, ಸಿದ್ದೇಶ್ವರ ಶ್ರೀಗಳು ದೊಡ್ಡ ಧಾರ್ಮಿಕ ಸಂತ, ಅವರು ಪ್ರವಚನದ ಮೂಲಕ ಜನರಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದವರು ಎಂದರು.

Latest Indian news

Popular Stories