ಸರಕಾರ ಪ್ರಜಾಪ್ರಭುತ್ವ ಮತ್ತು ನ್ಯಾಯದ ಕತ್ತು ಹಿಸುಕದಿರಲಿ -ಡಾ. ಮುಹಮ್ಮದ್ ಸಾದ್ ಬೆಳಗಾಮಿ

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಎನ್.ಐ.ಎ.,ಈ.ಡಿ. ಮತ್ತು ಪೋಲಿಸರ ಮೂಲಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.)ಕಚೇರಿ ಮತ್ತು ನಾಯಕರ ಮೇಲೆ ದಿಢೀರ್ ದಾಳಿ ನಡೆಸಿ ವಶಕ್ಕೆ ಪಡೆದಿರುವುದು ಅತ್ಯಂತ ಖಂಡನೀಯ. ಇದು ಮುಸ್ಲಿಮರು ಮತ್ತು ದುರ್ಬಲ ವರ್ಗದ ವಿರುದ್ಧ ಸರಕಾರದ ಏಕಪಕ್ಷೀಯ ಮತ್ತು ದಬ್ಬಾಳಿಕೆಯ ಮುಂದುವರಿದ ಭಾಗವಾಗಿದೆ.

ಹಿಜಾಬ್, ಅಝಾನ್, ಮಸೀದಿ, ಮದರಸಾಗಳು ಮತ್ತು ವಕ್ಫ್ ಸೊತ್ತುಗಳ ಕಾನೂನು ಬಾಹಿರ ಸಮೀಕ್ಷೆ, ಪ್ರವಾದಿ ನಿಂದನೆ ಘಟನೆಗಳು, ಬುಲ್ಡೋಜರ್ ಗಳ ಬಳಕೆ, ಈದ್ಗಾ ವಿವಾದ, ದ್ವೇಷ ಮತ್ತು ಹಿಂಸೆಯ ಮಾರುಕಟ್ಟೆಯನ್ನು ನಿರಂತರವಾಗಿ ಕಾಪಾಡುವುದು, ರಾಜಕೀಯ ಮತ್ತು ಸೇಡಿನ ಕೊಲೆಗಳು ಇತ್ಯಾದಿಗಳ ದೀರ್ಘ ಪಟ್ಟಿ ಹೀಗೆಯೇ ಮುಂದುವರಿಯುತ್ತಿದೆ. ಈಗ ಪಿ.ಎಫ್.ಐ. ಸಂಘಟನೆಯ ನಾಯಕರನ್ನು ಬಂಧಿಸಿ, ಮುಸ್ಲಿಮ್ ಯುವಕರಲ್ಲಿ ಸಿಟ್ಟು ಮತ್ತು ಹತಾಶೆಯ ಭಾವನೆಯನ್ನು ಮೂಡಿಸಲಾಗುತ್ತಿದೆ. ದ್ವೇಷ ಮತ್ತು ಹಿಂಸೆಯನ್ನು ಪ್ರತಿಪಾದಿಸುವ ಇತರ ಸಂಘಟನೆಗಳ ಕೃತ್ಯಗಳನ್ನು ಕಂಡೂ ಕಾಣದಂತೆ, ಮಾತ್ರವಲ್ಲದೆ ಅವರನ್ನು ಉತ್ತೇಜಿಸುವಂತೆ ಸರಕಾರವು ನಡೆಯುತ್ತಿದೆ. ಅನ್ಯಾಯ, ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತುವವರ ಹಾಗೂ ವಿರೋಧ ಪಕ್ಷಗಳ ವಿರುದ್ಧ ಏಜೆನ್ಸಿಗಳನ್ನು ಛೂ ಬಿಡುವ ಮೂಲಕ ಭಿನ್ನಧ್ವನಿಗಳನ್ನು ಅಡಗಿಸುವ ಕೃತ್ಯವು ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳ ಹಾಗೂ ನ್ಯಾಯದ ಕತ್ತು ಹಿಸುಕುವ ಕೆಲಸಗಳಾಗಿವೆ.
ಸರಕಾರವು ಪ್ರತೀ ಹಂತದಲ್ಲೂ ನ್ಯಾಯ ಪಾಲನೆಯನ್ನು ಮಾಡುವಂತೆ ನಾವು ಒತ್ತಾಯಿಸುತ್ತೇವೆ. ಅಪರಾಧ ಸಾಬೀತಾದರೆ ಮಾತ್ರ ಕ್ರಮ ಕೈಗೊಳ್ಳಬೇಕು, ಆರೋಪಿಗಳನ್ನು ತಕ್ಷಣವೇ ಬಿಡುಗಡೆಗೊಳಿಸಿ, ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ದ್ವೇಷದ ವಾತಾವರಣ ಅಂತ್ಯಗೊಳ್ಳಬೇಕು. ಎಲ್ಲಾ ವಿಧದ ಕೋಮುವಾದ ಮತ್ತು ಅನ್ಯಾಯ – ದಬ್ಬಾಳಿಕೆ ವಿರುದ್ಧ ನ್ಯಾಯಪ್ರಿಯ ಜನತೆ ಒಗ್ಗಟ್ಟಾಗಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ಜೆಐಎಚ್ ರಾಜ್ಯಾಧ್ಯಕ್ಷ ಡಾ. ಸಾದ್ ಬೆಳಗಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories