2,500 ಕೋಟಿ ಕೊಡಿ ನಿಮ್ಮನ್ನೂ ಸಿಎಂ ಮಾಡ್ತೀವಿ ಅಂದ್ರು: ಯತ್ನಾಳ್

ಬೆಳಗಾವಿ: ದೆಹಲಿಯಿಂದ ಬಂದ ಕೆಲವರು 2500 ಕೋಟಿ ಕೊಡಿ ನಿಮ್ಮನ್ನು ಸಿಎಂ ಮಾಡ್ತೀವಿ ಅಂತಾ ಹೇಳಿದ್ರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ರಾಮದುರ್ಗದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ಕೆಲವರು ನಿಮಗೆ ಟಿಕೆಟ್ ಕೊಡಿಸುತ್ತೇವೆ, ದೆಹಲಿ ಕರೆದುಕೊಂಡು ಹೋಗ್ತೇವೆ. ಸೋನಿಯಾ ಗಾಂಧಿ ಭೇಟಿ ಮಾಡಿಸ್ತೀವಿ, ಜೆ.ಪಿ.ನಡ್ಡಾರನ್ನ ಭೇಟಿ ಮಾಡಿಸ್ತೀವಿ ಅಂತಾ ಹೇಳಿ ಬರ್ತಾರೆ. ಹಾಗೇ ನನ್ನ ಹತ್ತಿರವೂ ದೆಹಲಿಯಿಂದ ಒಂದಿಷ್ಟು ಬಂದಿದ್ದರು ಎಂದಿದ್ದಾರೆ.

ನಿಮ್ಮನ್ನು ಸಿಎಂ ಮಾಡ್ತೀವಿ 2,500 ಕೋಟಿ ರೆಡಿ ಮಾಡ್ಕೋಳಿ ಅಂತಾ ಹೇಳಿದ್ರು. ಆದ್ರೆ ನಾನು, 2500 ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ. ಆ ಹಣ ಹೆಂಗ್ ಇಡೋದು? ಏನು ಕೋಣೆಯಲ್ಲಿ ಇಡೋದಾ ಅಥವಾ ಗೋದಾಮಿನಲ್ಲಿ ಇಡೋದಾ? ಎಂದು ಪ್ರಶ್ನಿಸಿದೆ ಎಂದು ಕಿಡಿಕಾರಿದ್ದಾರೆ.

ಟಿಕೆಟ್ ಕೊಡ್ತೀನಿ ಅಂತಾ ರಾಜಕಾರಣದಲ್ಲಿ ಎಲ್ಲಾ ಕಡೆ ಮೋಸ ಮಾಡ್ತಾರೆ. ಎಚ್ಚರಿಕೆಯಿಂದ ಇರಬೇಕು. ರಾಜಕಾರಣದಲ್ಲಿ ಯಾರೂ ದೆಹಲಿಗೆ ಹೋಗಿ ಹಾಳಾಗಬೇಡಿ ಎಂದು ಕರೆ ನೀಡಿದ್ದಾರೆ.

ನಾನು ವಾಜಪೇಯಿಯವರ ಕೈಕೆಳಗೆ ಕೆಲಸ ಮಾಡಿದ್ದೇನೆ. ಅಡ್ವಾಣಿ, ರಾಜನಾಥಸಿಂಗ್, ಅರುಣ್ ಜೇಟ್ಲಿ ಅವರು ನನ್ನನ್ನು ಬಸನಗೌಡ ಅಂತಾ ಹೆಸರು ಹೇಳಿ ಕರೀತಿದ್ರು. ಅಂತಹ ವ್ಯಕ್ತಿಗೆ ಎರಡೂಸಾವಿರ ಕೋಟಿ ಸಜ್ಜ ಮಾಡಿ ಇಡಿ ಸಿಎಂ ಮಾಡ್ತೀವಿ ಅಂತಾ ಹೇಳ್ತಾರೆ. ನಡ್ಡಾರ ಮನೆಗೆ ಕರೆದುಕೊಂಡು ಹೋಗ್ತೀವಿ, ಅಮಿತ್ ಶಾ ಮನೆಗೆ ಕರೆದುಕೊಂಡು ಹೋಗ್ತೀವಿ ಅಂತಾರೆ ಎಂದು ದೂರಿದ್ದಾರೆ.

Latest Indian news

Popular Stories