ಕಾರವಾರ : ಹನ್ನೆರಡನೇ ಶತಮಾನ ಶರಣರ, ವಚನಕಾರರ ಕಾಲ.ಬಸವಣ್ಣನವರಂತೆ ಅಂಬಿಗರ ಚೌಡಯ್ಯ ಪ್ರಮುಖ ವಚನಕಾರರು. ಅವರು ನೇರ, ನಿಷ್ಠುರ ವಚನಗಳಿಂದ ಸಮಾಜದ ಅಂಕು-ಡೊಂಕುಗಳನ್ನು ಟೀಕಿಸಿದರು.ಆ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.
ಕಾರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸಮಾಜದಲ್ಲಿನ ಸಣ್ಣ ಸಣ್ಣ ಸಮುದಾಯಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಆ ಸಮುದಾಯದ ದಾರ್ಶನಿಕರ ಜಯಂತಿಗಳನ್ನು ಆಚರಿಸುವುದು ಅವಶ್ಯವಾಗಿದೆ. ಎಲ್ಲಾ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದು ನುಡಿದರು
ಮಾಣೇಶ್ವರ ನಾಯ್ಕ ನಿಜಶರಣ ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ ನೀಡಿ ಅಂಬಿಗರ ಚೌಡಯ್ಯ ಮಹಾ ನಿಷ್ಠುರತೆ ಹೊಂದಿದ್ದರು. ಡಾಂಭಿಕ ಜನರನ್ನು, ಮೂಢ ಆಚರಣೆಗಳನ್ನು ಕಟುಶಬ್ದಗಳಲ್ಲಿ ಟೀಕಿಸಿದವರು .
ಅವರ ವಚನಗಳು ಯುವ ಪೀಳಿಗೆಗೂ ದಾರಿ ದೀಪ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೆ. ರಾಮಚಂದ್ರ ಮಡಿವಾಳ , ನಗರಸಭೆ ಪೌರಾಯುಕ್ತ ಚಂದ್ರಮೌಳಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
…….