ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಬೆಳಗಾವಿ: ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಅವರ ಮನಸ್ಥಿತಿ ಬದಲಾಗಲ್ಲ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ. ಗ್ಯಾರಂಟಿ ಯೋಜನೆಗಳ ಪರಿಣಾಮ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ.
ಕಾಂಗ್ರೆಸ್ ಸರಕಾರದಿಂದ ಯಾವ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ.
ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತದೆ ಎಂದು ಅವರ ಶಾಸಕರೇ ಹೇಳುತ್ತಿದ್ದಾರೆ. ಈಗಾಗಲೇ ಅವರಿಗೆ ಭಯ ಶುರುವಾಗಿದೆ. ಹೀಗಾಗಿ ಚುನಾವಣೆ ಆದಮೇಲೆ ಯಾವುದೇ ಕ್ಷಣದಲ್ಲಿ ಸರಕಾರ ಪತನವಾಗಲಿದೆ ಎಂದು ಶೆಟ್ಟರ್ ಭವಿಷ್ಯ ನುಡಿದರು.
ಕಾಂಗ್ರೆಸ್ ನವರು ಈಗೀಗ ಕೇಸರಿ ಶಾಲು ಹಾಕಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಕೇಸರಿ ಶಾಲು ಹಾಕಿದಾಕ್ಷಣ ನಿಮ್ಮ ಮನಸ್ಥಿತಿ ಬದಲಾಗುವುದಿಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣ ನಿಲ್ಲಿಸಲು ಸಾಧ್ಯವಿಲ್ಲ. ಇಂತಹುದಕ್ಕೆ ಜನರು ಮರುಳಾಗುವದಿಲ್ಲ.

ಕಾಂಗ್ರೆಸ್ ಸರಕಾರ ಬಂದ ಮೇಲೆ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆ ರದ್ದುಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಇದುವರೆಗೆ ಅದು ಸಾಧ್ಯವಾಗಿಲ್ಲ. ಹಾಗಿದ್ದರೆ ಬಿಜೆಪಿ ತಂದಿರುವ ಈ ಕಾಯ್ದೆಗಳ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಶೆಟ್ಟರ್ ಸವಾಲು ಹಾಕಿದರು.

Latest Indian news

Popular Stories