ರಾಮನಗರದ ವಕೀಲರ ವಿರುದ್ಧ ಎಫ್ಐಆರ್ ಪ್ರಕರಣ: ಐಜೂರು ಪೊಲೀಸ್ ಠಾಣೆ ಪಿಎಸ್​ಐ ಅಮಾನತು

ರಾಮನಗರ: 40 ವಕೀಲರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಖಂಡಿಸಿ ವಕೀಲರು ನಡೆಸುತ್ತಿರುವ ಪ್ರತಿಭಟನೆ ಇಡೀ ರಾಮನಗರ ಜಿಲ್ಲೆಯಲ್ಲಿ ಆಕ್ರೋಶವನ್ನು ಹೆಚ್ಚಿಸಿದೆ. ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು ವಿಧಾನಸಭಾ ಕಲಾಪದಲ್ಲೂ ಚರ್ಚೆಯಾಗುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ರಾಮನಗರದ 40 ವಕೀಲರ ವಿರುದ್ಧ ಐಜೂರು ಪೊಲೀಸ್ ಠಾಣೆ ಪಿಎಸ್​ಐ ಆಗಿದ್ದ ತನ್ವೀರ್ ಹುಸೇನ್​ ಅವರು ಎಫ್​ಐಆರ್​ ದಾಖಲಿಸಿದ್ದರು. ಎಫ್​ಐಆರ್ ರದ್ದು ಮಾಡುವಂತೆ ಆಗ್ರಹಿಸಿ ವಕೀಲರು ಸೋಮವಾರ ಪ್ರತಿಭಟನೆ ಆರಂಭಿಸಿದರು. ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿತ್ತು.

ಧರಣಿನಿರತ ವಕೀಲರಿಗೆ ಪ್ರತಿಪಕ್ಷ ನಾಯಕ ಆರ್ ಅಶೋಕ, ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಅವರು ಕೂಡ ಸಾಥ್ ನೀಡಿದ್ದರು. ತಡ ರಾತ್ರಿ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಧರಣಿ ನಡೆಸುತ್ತಿದ್ದ ವಕೀಲರಿಗೆ ಕೈ ಜೋಡಿಸಿದ್ದರು. ಇದಾದ ಬಳಿಕ ಈ ವಿಚಾರ ದೊಡ್ಡ ಮಟ್ಟಿಗೆ ಚರ್ಚೆ ಆಗಲು ಆರಂಭವಾಯಿತು. ಈ ವಿಚಾರ ಸಂಬಂಧ ಜೆಡಿಎಸ್, ಬಿಜೆಪಿ ಸದಸ್ಯರು ಸರ್ಕಾರದ ಉತ್ತರಕ್ಕಾಗಿ ಒತ್ತಾಯಿಸುತ್ತಿದೆ.

ಮತ್ತೊಂದೆಡೆ ಫೆ.19ರಂದು ಶುರುವಾದ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು ತಡರಾತ್ರಿ ಕೂಡ ಧರಣಿ ನಡೆದಿದೆ. ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ವಕೀಲರು ತಡರಾತ್ರಿ ವರೆಗೂ ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ಈಗ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನ ಅಮಾನತು ಮಾಡಲಾಗಿದೆ.

Latest Indian news

Popular Stories