ಅಪರಾಧ ಪ್ರಕರಣಗಳನ್ನು ಹೊರ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಹ್ಯಾಟ್ಸ್ ಆಫ್: ನಟಿ ರಮ್ಯಾ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಪ್ರಕರಣವನ್ನು ಬಹಿರಂಗವಾಗಿ ಖಂಡಿಸಿದ ಕೆಲವೇ ಕೆಲವರಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಕೂಡ ಒಬ್ಬರು.

ದರ್ಶನ್ ಬಂಧನ ವಿಚಾರದಲ್ಲಿ ಪೊಲೀಸರು ಯಾವುದೇ ಪ್ರಭಾವ, ಆಮಿಷಕ್ಕೆ ಒಳಗಾಗದೆ ಸರಿಯಾಗಿ ಕೆಲಸ ಮಾಡಿ ಪ್ರಕರಣದಲ್ಲಿ ಅಮಾಯಕ, ಮುಗ್ಧರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದಾರೆ.

ಇದೀಗ ಇಂದು ಮತ್ತೆ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪ್ರಕರಣ ಬಗ್ಗೆ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಪ್ರಕರಣಗಳಲ್ಲಿ ಕಾನೂನು ಮುರಿದವರು ಶ್ರೀಮಂತರು, ಶಕ್ತಿಶಾಲಿಗಳು ಮತ್ತು ಪ್ರಭಾವಿ ವ್ಯಕ್ತಿಗಳಾಗಿದ್ದರು. ಅವರ ಹಿಂಸಾತ್ಮಕ ಕ್ರಿಯೆಗಳಿಗೆ ಬಲಿಯಾದವರು ಬಡವರು, ಮಹಿಳೆಯರು ಮತ್ತು ಮಕ್ಕಳು, ಜನಸಾಮಾನ್ಯರು.

ಕರ್ನಾಟಕದಲ್ಲಿ ಇತ್ತೀಚೆಗೆ ಇಂತಹ ಅಪರಾಧ ಪ್ರಕರಣಗಳನ್ನು ಹೊರಗೆ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಹ್ಯಾಟ್ಸ್ ಆಫ್. ಇಂತಹ ಪ್ರಕರಣಗಳಲ್ಲಿ ವಿಚಾರಣೆಯನ್ನು ತ್ವರಿತಗೊಳಿಸಿದಾಗ ಅವುಗಳ ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗಿ ನ್ಯಾಯ ನೀಡಬಹುದು. ಇಂತಹ ಪ್ರಕರಣಗಳಲ್ಲಿ ನ್ಯಾಯವು ಮೇಲುಗೈ ಸಾಧಿಸದಿದ್ದರೆ, ಸಾರ್ವಜನಿಕರಿಗೆ ಯಾವ ಸಂದೇಶ ನೀಡಲು ಸಾಧ್ಯ ಎಂದು ಪ್ರಜ್ವಲ್ ರೇವಣ್ಣ, ನಟ ದರ್ಶನ್, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸೂರಜ್ ರೇವಣ್ಣ ಪ್ರಕರಣವನ್ನು ಉಲ್ಲೇಖಿಸಿ ಹೇಳಿದ್ದಾರೆ.

Latest Indian news

Popular Stories