ಅರುಣಾಚಲದ ಹೊಟೇಲ್‌ನಲ್ಲಿ ಕೇರಳದ ವೈದ್ಯ ದಂಪತಿ, ಮಹಿಳೆ ನಿಗೂಢ ಸಾವು: ಸಾವಿನ ಸುತ್ತ ಹಲವು ಅನುಮಾನ

ತಿರುವನಂತಪುರ: ಕೇರಳ ಮೂಲದ ಆಯುರ್ವೇದ ವೈದ್ಯ ದಂಪತಿ ಹಾಗೂ ಅವರ ಅವಿವಾಹಿತ ಸ್ನೇಹಿತೆ ಅರುಣಾಚಲ ಪ್ರದೇಶದ ಜಿರೋ ನಗರದ ಹೊಟೇಲೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ.

ಪ್ರಾಥಮಿಕ ವರದಿಯ ಪ್ರಕಾರ, ಮೃತರ ಕೈ ಮಣಿಕಟ್ಟಿನಲ್ಲಿ ಹರಿತವಾದ ಆಯುಧಗಳಿಂದ ಕತ್ತರಿಸಿಕೊಂಡ ಗುರುತುಗಳಿದ್ದು, ರಕ್ತಸ್ರಾವವಾಗಿ ಸಾವನ್ನಪ್ಪಿದಂತೆ ಭಾಸವಾಗುತ್ತಿದೆ.

ಮೃತರನ್ನು ನವೀನ್ ಥಾಮಸ್ (35) ಮತ್ತು ಅವರ ಪತ್ನಿ ದೇವಿ (35) ಹಾಗೂ ಇವರ ಜೊತೆಗೆ ಸಾವನ್ನಪ್ಪಿದ ಸ್ನೇಹಿತನನ್ನು ಆರ್ಯ ಬಿ ನಾಯರ್ (29) ಎಂದು ಗುರುತಿಸಲಾಗಿದೆ. ಇದರಲ್ಲಿ ದಂಪತಿಯಾದ ನವೀನ್ ಥಾಮಸ್ ಹಾಗೂ ದೇವಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಆಯುರ್ವೇದ ವೈದ್ಯರಾಗಿದ್ದರು. ಹಾಗೆಯೇ ಆರ್ಯ ಬಿ, ನಾಯರ್ ತಿರುವನಂತಪುರ ನಿವಾಸಿಯಾಗಿದ್ದು, ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಅರುಣಾಚಲ ಪ್ರದೇಶದ ಲೋವರ್ ಸುಬನ್ಸಿರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೇನಿ ಬಾಗ್ರಾ ಅವರ ಪ್ರಕಾರ, ಈ ಮೂವರು ಮಾರ್ಚ್ 28 ರಂದು ಅರುಣಾಚಲದ ಹೋಟೆಲ್‌ಗೆ ಆಗಮಿಸಿದ್ದರು ಮತ್ತು ಅಂದಿನಿಂದಲೂ ಒಂದು ಕೊಠಡಿಯನ್ನು ಹಂಚಿಕೊಂಡಿದ್ದರು.

ಆದರೆ ಇವರಲ್ಲಿ ಅವಿವಾಹಿತರಾಗಿದ್ದ ಆರ್ಯ ಅವರ ಮದುವೆಯನ್ನು ಮುಂದಿನ ತಿಂಗಳು ನಿಗದಿಪಡಿಸಲಾಗಿದೆ ಎಂದು ಮಾರ್ಚ್ 27 ರಂದು ವರದಿ ಮಾಡಲಾಗಿದ್ದು, ಈ ಮಧ್ಯೆ ಆರ್ಯ ಅವರ ಸಂಬಂಧಿಕರು ತಿರುವನಂತಪುರಂ ಪೊಲೀಸ್ ಠಾಣೆಯಲ್ಲಿ ಅವರು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.

ಆ ದೂರನ್ನು ಬೆನ್ನತ್ತಿ ತನಿಖೆ ನಡೆಸಿದಾಗ ಆರ್ಯ ಅವರು ಅರುಣಾಚಲ ಪ್ರದೇಶದಲ್ಲಿ ಸಾಯುವುದಕ್ಕೂ ಮೊದಲು ನವೀನ್ ಥಾಮಸ್ ಮತ್ತು ದೇವಿಯೊಂದಿಗೆ ಗುವಾಹಟಿಗೆ ಹೋಗಿದ್ದರು ಎಂದು ಕೇರಳದ ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories