ಅಂಕೋಲಾದ ಪ್ರಕಾಶಕ ,ಲೇಖಕ ವಿಷ್ಣು ನಾಯ್ಕ ಮರಳಿ ಮಣ್ಣಿಗೆ

ಕಾರವಾರ : ಅಂಕೋಲಾದ ಅಂಬಾರಕೊಡ್ಲದ ಪರಿಮಳದ ಕವಿ ಲೇಖಕ ವಿಷ್ಣು ನಾಯ್ಕ ನಿನ್ನೆ ರಾತ್ರಿ ಅಲ್ಪ ಕಾಲದ ಅಸ್ವಸ್ಥತೆ ಯಿಂದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ನಾಡಿನ ಸಶಕ್ತ ಲೇಖಕ , ಪ್ರಕಾಶಕ , ಕವಿಯಾಗಿದ್ದ ಅವರು ನಾಡಿನ 170 ಕ್ಕೂ ಹೆಚ್ಚು ಲೇಖಕರ ಕತೆ,ಕವಿತೆ, ವಿಮರ್ಶೆ, ನಾಟಕ, ಕಾದಂಬರಿಗಳನ್ನು ಪ್ರಕಟಿಸಿದ್ದರು.

ಶಿಕ್ಷಕರಾಗಿ ಜೀವನ ಪ್ರಾರಂಭಿಸಿದ್ದ ಅವರು , ದಾಂಡೇಲಿ ಜನತಾ ವಿದ್ಯಾಲಯದಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಆರಂಭದಲ್ಲಿ ಕೆಲಸ ಮಾಡಿದ್ದರು. ನಂತರ ಅಂಕೋಲಾ ಅವರ ಕಾರ್ಯಕ್ಷೇತ್ರವಾಗಿತ್ತು. ದಿನಕರ ದೇಸಾಯಿ ಅವರ ಒಡನಾಡಿಗಳಲ್ಲಿ ವಿಷ್ಣು ನಾಯ್ಕ ಪ್ರಮುಖರು‌ .

ಶಿಕ್ಷಣ ಸಂಘಟನೆಯಲ್ಲಿ ಕೆಲಸ ಮಾಡಿದರು. ಬೀದಿ ನಾಟಕಗಳ ಮೂಲಕ ಜನ ಜಾಗ್ರತೆ ಮೂಡಿಸಿದ್ದರು.

ಶಿಕ್ಷಕರಾಗಿ ನಂತರ ಪಿಯು ಕಾಲೇಜು ಉಪನ್ಯಾಸಕರಾಗಿದ್ದ ಅವರು ನಿವೃತ್ತಿಯ ನಂತರದಲ್ಲಿ ಕೆನರಾ ವೆಲಫೆರ್‌ ಟ್ರಸ್ಟ್ ನ ಟ್ರಸ್ಟಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಅಂಕೋಲೆಯ ಅಂಬಾರಕೊಡ್ಲದ ಬುದವಂತಿ ಮತ್ತು ನಾಗಪ್ಪ ನಾಯ್ಕ ದಂಪತಿಗಳ ಮಗನಾಗಿ ಹುಟ್ಟಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.

ಕಾವ್ಯ, ನಾಟಕ, ಕಥೆ, ಕಾದಂಬರಿ, ಜಾನಪದ, ವಿಮರ್ಶೆ , ಶಿಕ್ಷಣ, ಪತ್ರಿಕೋದ್ಯಮ, ರಂಗಭೂಮಿ, ಚಳುವಳಿ, ಪ್ರಕಾಶನ ಹೀಗೆ ಬಹುಮುಖ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು‌ . ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

ವಿಷ್ಣು ನಾಯ್ಕ ಅವರ ಪತ್ನಿ ಕವಿತಾ ನಾಯ್ಕ ಐದು ವರ್ಷಗಳ ಹಿಂದೆ ನಿಧನರಾಗಿದ್ದರು. ವಿಷ್ಣು ನಾಯ್ಕ ಈರ್ವರು ಪುತ್ರಿಯರು, ಅಳಿಯಂದಿರು, ಇಬ್ಬರು ಸಹೋದರರನ್ನು ಅಗಲಿದ್ದಾರೆ‌ .ಸಾಹಿತ್ಯ ಲೋಕದ ಹಲವರು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Latest Indian news

Popular Stories